'ಲೆಟ್ಸ್ ಗೋ ಖಬೀಬ್' ಅಪಹಾಸ್ಯಕ್ಕೆ ಕೋನೊರ್ ಮೆಕ್ ಗ್ರೆಗರ್ ಪ್ರತಿಕ್ರಿಯೆ ಏನು ಗೊತ್ತೇ?

PC: x.com/AndrewPatriot_
ಹೊಸದಿಲ್ಲಿ: 'ಲೆಟ್ಸ್ ಗೊ ಖಬೀಬ್' ಎಂದು ಐರ್ಲೆಂಡ್ ನ ಎಂಎಂಎ ತಾರೆ ಕೊನೊರ್ ಮೆಕ್ ಗ್ರೆಗರ್ ಮುಂದೆ ಅಪಹಾಸ್ಯ ಮಾಡಿದ ಯುಎಫ್ ಸಿ ಅಭಿಮಾನಿಯೊಬ್ಬರ ಮುಖದ ಮೇಲೆ ಮೆಕ್ ಗ್ರೆಗರ್ ಉಗುಳಿದ ಅಪರೂಪದ ಪ್ರಸಂಗದ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಾಸ್ ವೇಗಸ್ ನ ವ್ಯಾನ್ ಹೋಟೆಲ್ ನಿಂದ ಕೊನೊರ್ ತಮ್ಮ ತಂಡದೊಂದಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಖಬೀಬ್ ನರ್ಮಗೋಮೆಡೋವ್ ಅವರ ಅಭಿಮಾನಿಯೊಬ್ಬ 'ಲೆಟ್ಸ್ ಗೊ ಖಬೀಬ್' ಎಂದು ಘೋಷಣೆ ಕೂಗಿದ್ದು ಮೆಕ್ ಗ್ರೆಗರ್ ಗಮನಕ್ಕೆ ಬಂತು. ಈ ಸಂದರ್ಭದಲ್ಲಿ ಅಭಿಮಾನಿಯ ಬಳಿಗೆ ಬಂದ 36 ವರ್ಷದ ಎಂಎಂಎ ತಾರೆ, ಅಭಿಮಾನಿಯ ಮುಖಕ್ಕೆ ಉಗುಳಿದರು. ಈ ಆಘಾತದಿಂದ ಚೇತರಿಸಿಕಳ್ಳಲು ಅಭಿಮಾನಿಗೆ ಕೆಲ ಸೆಕೆಂಡ್ ಗಳ ಕಾಲ ಬೇಕಾಯಿತು. ಅಲ್ಲಿಂದ ಹೊರಡುವಾಗ ಮೆಕ್ ಗ್ರೆಗೊರ್ "ನಾನು ನಿನ್ನ ಮುಖಕ್ಕೆ ಉಗಿದಿದ್ದೇನೆ. ನೀನೇನು ಮಾಡಲು ಸಾಧ್ಯ? ಏನೂ ಇಲ್ಲ!" ಎಂದು ಹೇಳಿದರು.
ಮೆಕ್ ಗ್ರೆಗೊರ್ ಮತ್ತು ಖಬೀಬ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಭಾರಿ ಶೀತಲ ಸಮರ ನಡೆಯುತ್ತಿದೆ. ಪಾಲ್ ಹಗೇಸ್ ಮತ್ತು ಉಸ್ಮಾನ್ ನರ್ಮಗೊಮೆಡೋವ್ ಜತೆಗಿನ ಕಾದಾಟದ ನಡುವೆ ಇದು ತಾರಕಕ್ಕೇರಿತು. ಉಸ್ಮಾನ್ ಅವರು ಖಬೀಬ್ ಅವರ ಸಹೋದರ ಸಂಬಂಧಿಯಾಗಿದ್ದು, ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಉಸ್ಮಾನ್ ಪ್ರಸ್ತುತ ಹ್ಯೂಗೆಸ್ ವಿರುದ್ಧ 19-0 ಗೆಲುವಿನ ದಾಖಲೆ ಹೊಂದಿದ್ದಾರೆ.
ಕೊನೊರ್ ಕೊನೆಯ ಬಾರಿಗೆ ನಾಲ್ಕು ವರ್ಷದ ಹಿಂದೆ ಯುಎಫ್ ಸಿ ಕಣದಲ್ಲಿ ಕಾಣಿಸಿಕೊಂಡಿದ್ದು, ಆ ವೇಳೆ ಅವರು ಡಸ್ಟಿನ್ ಪ್ರಿರಿಯರ್ ವಿರುದ್ಧ ಸೋಲು ಅನುಭವಿಸಿ, ಭೀಕರ ಕಾಲಿನ ಗಾಯಕ್ಕೆ ತುತ್ತಾಗಿದ್ದರು. ಮೈಕೆಲ್ ಚಾಂಡ್ಲೇರ್ ವಿರುದ್ಧದ ಬಹುನಿರೀಕ್ಷಿತ ಪಂದ್ಯವನ್ನೂ ಗಾಯದ ಕಾರಣದಿಂದ ರದ್ದುಪಡಿಸಿದ್ದರು.