ರವಿಶಾಸ್ತ್ರಿ ಹೆಸರಿಸಿದ ಭಾರತದ ಉದಯೋನ್ಮುಖ ಕ್ರಿಕೆಟ್ ತಾರೆ ಯಾರು ಗೊತ್ತೇ?

PC: x.com/Cric_records
ಹೊಸದಿಲ್ಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕ ಶುಭ್ಮನ್ ಗಿಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಕೇವಲ 25ನೇ ವಯಸ್ಸಿನಲ್ಲೇ ಟೆಸ್ಟ್ ನಾಯಕತ್ವದ ಹೊಣೆ ಹೆಗಲೇರಿದ್ದರೂ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-2 ಅಂತರದಿಂದ ಡ್ರಾಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಗಳಲ್ಲಿ ನಾಲ್ಕು ಶತಕಗಳ ಸಹಿತ 75.40 ಸರಾಸರಿಯಲ್ಲಿ 754 ರನ್ ಗಳನ್ನು ಅವರು ಕಲೆ ಹಾಕಿದ್ದಾರೆ. ಜೀವನಶ್ರೇಷ್ಠ 269 ರನ್ ಗಳೂ ಈ ಸರಣಿಯಲ್ಲಿ ದಾಖಲಾಗಿವೆ. ಈ ಅದ್ಭುತ ಫಾರ್ಮ್ ನಲ್ಲಿರುವ ಗಿಲ್ ಅವರು ಜುಲೈ ತಿಂಗಳ ಐಸಿಸಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಈ ಉದಯೋನ್ಮುಖ ಆಟಗಾರನನ್ನು ಶ್ಲಾಘಿಸಿರುವ ಮಾಜಿ ಆಲ್ರೌಂಡರ್ ಮತ್ತು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ, ಗಿಲ್ ಧೀರ್ಘಕಾಲದ ವರೆಗೆ ತಂಡದಲ್ಲಿ ಇರುತ್ತಾರೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಸ್ಕೈಸ್ಪೋರ್ಟ್ಸ್ ಕ್ರಿಕೆಟ್ ಜತೆ ಮಾತನಾಡಿದ ಅವರು, ಭಾರತದ ಉದಯೋನ್ಮುಖ ತಾರೆಯ ಬಗ್ಗೆ ಕೇಳಿದಾಗ, "ಶುಭ್ಮನ್ ಗಿಲ್ ಅವರು ಸುಧೀರ್ಘ ಕಾಲದವರೆಗೆ ಇರುತ್ತಾರೆ. ಏಕೆಂದರೆ ಅವರು ಯಾವ ಬಗೆಯ ಸರಣಿಯನ್ನು ಪೂರೈಸಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಅವರಿಗೆ ಕೇವಲ 25 ವರ್ಷ. ಸಾಕಷ್ಟು ಅವಕಾಶಗಳು ಸಿಕ್ಕಿದಾಗ ಇನ್ನೂ ಉತ್ತಮ ಪ್ರದರ್ಶನವನ್ನು ಅವರಿಂದ ನಿರೀಕ್ಷಿಸಬಹುದು" ಎಂದು ಹೇಳಿದರು.
ಈ ವರ್ಷ ಗಿಲ್ 14 ಪಂದ್ಯಗಳ 20 ಇನಿಂಗ್ಸ್ ಗಳಲ್ಲಿ 1234 ರನ್ ಕಲೆ ಹಾಕಿದ್ದಾರೆ. ಆರು ಶತಕಗಳನ್ನು ಸಿಡಿಸಿರುವ ಅವರು 64.94 ಸರಾಸರಿ ಹೊಂದಿದ್ದಾರೆ. ಇದು ಈ ವರ್ಷ ಯಾವುದೇ ಬ್ಯಾಟ್ಸ್ಮನ್ ಗಳಿಸಿದ ಗರಿಷ್ಠ ರನ್ ಆಗಿದ್ದು, ಎಲ್ಲ ಬಗೆಯ ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನೂ ಗಳಿಸಿದ್ದಾರೆ. ಇಂಗ್ಲೆಂಡ್ ನ ಬೆನ್ ಡಕೆಟ್ 23 ಪಂದ್ಯಗಳ 27 ಇನಿಂಗ್ಸ್ ಗಳಲ್ಲಿ 47.77 ಸರಾಸರಿಯಲ್ಲಿ 1290 ರನ್ ಕಲೆ ಹಾಕಿದ್ದಾರೆ. ಇವರು ಮೂರು ಶತಕ ಹಾಗೂ ಎಂಟು ಅರ್ಧಶತಕ ಸಿಡಿಸಿದ್ದು, ಗರಿಷ್ಠ 165 ರನ್ ಪಡೆದಿದ್ದಾರೆ.
ಗಿಲ್ ಅವರ ಪ್ರತಿಸ್ಪರ್ಧಿಗಳ ಪೈಕಿ ಕೆ.ಎಲ್.ರಾಹುಲ್ 14 ಪಂದ್ಯಗಳಿಂದ 19 ಇನಿಂಗ್ಸ್ಗಳಲ್ಲಿ 46.31 ಸರಾಸರಿಯಲ್ಲಿ 741 ರನ್ ಗಳಿದ್ದಾರೆ. ಎರಡು ಶತಕ ಹಾಗೂ ಎರಡು ಅರ್ಧಶತಕಗಳು ಇದರಲ್ಲಿ ಸೇರಿವೆ. ರವೀಂದ್ರ ಜಡೇಜಾ 13 ಪಂದ್ಯಗಳ 17 ಇನಿಂಗ್ಸ್ ಗಳಲ್ಲಿ 67.22 ಸರಾಸರಿಯಲ್ಲಿ 605 ರನ್ ಗಳಿಸಿದ್ದು, ಒಂದು ಶತಕ ಹಾಗೂ ಐದು ಅರ್ಧಶತಕಗಳನ್ನು ಸಿಡಿಸಿದ್ದಾರೆ.







