ಕೀನ್ಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ದೊಡ್ಡ ಗಣೇಶ್ ನೇಮಕ

ದೊಡ್ಡ ಗಣೇಶ್ | PC : NDTV
ನೈರೋಬಿ : ಭಾರತದ ಮಾಜಿ ಆಲ್ರೌಂಡರ್ ದೊಡ್ಡ ಗಣೇಶ್ ಅವರನ್ನು 2026ರ ಟಿ20 ವಿಶ್ವಕಪ್ಗಾಗಿ ನಡೆಯಲಿರುವ ಆಫ್ರಿಕಾ ಕ್ವಾಲಿಫೈಯರ್ಸ್ ಗಿಂತ ಮೊದಲು ಕೀನ್ಯದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.
51ರ ವಯಸ್ಸಿನ ಕನ್ನಡಿಗ ಗಣೇಶ್ ಅವರು ಭಾರತದ ಪರ 4 ಟೆಸ್ಟ್ ಹಾಗೂ 1 ಏಕದಿನ ಪಂದ್ಯವನ್ನು ಆಡಿದ್ದರೂ ಯಶಸ್ಸು ಕಂಡಿರಲಿಲ್ಲ. ಆದರೆ ಅವರು 104 ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕರ್ನಾಟಕದ ಪರ 2,023 ರನ್ ಹಾಗೂ 365 ವಿಕೆಟ್ಗಳನ್ನು ಉರುಳಿಸಿದ್ದಾರೆ.
1996 ಹಾಗೂ 2011ರ ನಡುವೆ ಐದು ವಿಶ್ವಕಪ್ಗಳಲ್ಲಿ ಸ್ಪರ್ಧಿಸಿರುವ ಕೀನ್ಯದ ಕ್ರಿಕೆಟ್ನ ಗತವೈಭವವನ್ನು ಮರುಕಳಿಸುವಂತೆ ಮಾಡುವ ಕಠಿಣ ಸವಾಲು ಗಣೇಶ್ ಮುಂದಿದೆ.
ಅಸೋಸಿಯೇಟ್ ಸದಸ್ಯ ರಾಷ್ಟ್ರವಾಗಿರುವ ಕೀನ್ಯವು 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ತಲುಪಿತ್ತು. ಇದು ಕೀನ್ಯದ ಉತ್ತಮ ಸಾಧನೆಯಾಗಿದೆ. ಆಗ ಭಾರತದ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರು ಕೀನ್ಯದ ಮುಖ್ಯ ಕೋಚ್ ಆಗಿದ್ದರು.
ಕೀನ್ಯ 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ಗೆ ಮಾತ್ರ ಅರ್ಹತೆ ಪಡೆದಿತ್ತು. ಆ ನಂತರ ಕೀನ್ಯ ಕ್ರಿಕೆಟ್ ಸಾಧನೆಯು ಇಳಿಮುಖವಾಗಿತ್ತು.
ಸೆಪ್ಟಂಬರ್ ನಲ್ಲಿ ನಡೆಯುವ ಐಸಿಸಿ ಡಿವಿಜನ್ 2 ಚಾಲೆಂಜ್ ಲೀಗ್ ಹಾಗೂ ಅಕ್ಟೋಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಫ್ರಿಕ ಕ್ವಾಲಿಫೈಯರ್ಸ್ ನಲ್ಲಿ ಕೀನ್ಯ ತಂಡವು ಪಪುವಾ ನ್ಯೂ ಗಿನಿ, ಖತರ್, ಡೆನ್ಮಾರ್ಕ್ ಹಾಗೂ ಜೆರ್ಸಿ ಕ್ರಿಕೆಟ್ ತಂಡಗಳನ್ನು ಎದುರಿಸಲಿದೆ.
ಪುರುಷರ 2026ರ ಟಿ20 ವಿಶ್ವಕಪ್ ಟೂರ್ನಿಯು ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
ನಾನು ಹೊಸ ಹುದ್ದೆಯನ್ನು ಎದುರು ನೋಡುತ್ತಿರುವೆ ಎಂದು ದೊಡ್ಡ ಗಣೇಶ್ ಹೇಳಿದ್ದಾರೆ.
ಕೀನ್ಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದು ವಿಶೇಷವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೀನ್ಯ ಮಾಧ್ಯಮಗಳು ಹಂಚಿಕೊಂಡಿರುವ ವೀಡಿಯೊದಲ್ಲಿ, ಗಣೇಶ್ ಅವರು ಕೀನ್ಯ ಕ್ರಿಕೆಟ್ನ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸುತ್ತಿರುವುದು ಕಂಡು ಬಂದಿದೆ.
ಗಣೇಶ್ ಅವರೊಂದಿಗೆ ಕೀನ್ಯದ ಮಾಜಿ ಅಂತರರಾಷ್ಟ್ರೀಯ ಆಟಗಾರರಾದ ಲ್ಯಾಮೆಕ್ ಒನ್ಯಾಂಗೊ ಹಾಗೂ ಜೋಸೆಫ್ ಅಂಗಾರ ಅವರು ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.







