ದುಬೈ ಅಥವಾ ಲಾಹೋರ್? ಆಸೀಸ್- ಆಫ್ರಿಕಾಗೆ ಸೆಮೀಸ್ ತಾಣ ಇನ್ನೂ ಅನಿಶ್ಚಿತ

ಕರಾಚಿ: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ತಲುಪುತ್ತಿದ್ದಂತೆ ಆಸ್ಟ್ರೇಲಿಯಾ ತಂಡ ದುಬೈಗೆ ಪ್ರಯಾಣ ಬೆಳೆಸಿದೆ. ಶನಿವಾರವಷ್ಟೇ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದ ದಕ್ಷಿಣ ಆಫ್ರಿಕಾ ರವಿವಾರ ನಸುಕಿನಲ್ಲಿ ದುಬೈಗೆ ಪ್ರಯಾಣಿಸಲಿದೆ. ಆದರೆ ವಾಸ್ತವವಾಗಿ ಯಾವ ತಂಡದ ಸೆಮಿಫೈನಲ್ ಅಲ್ಲಿ ನಡೆಯಲಿದೆ ಎನ್ನುವುದು ಇನ್ನೂ ಅನಿಶ್ಚಿತವಾಗಿಯೇ ಉಳಿದಿದೆ.
ಮೊದಲ ಸೆಮಿಫೈನಲ್ ಪಂದ್ಯ ಮಂಗಳವಾರ ದುಬೈನಲ್ಲಿ ನಡೆಯಲಿದ್ದು, ಲಾಹೋರ್ ನಲ್ಲಿ ಎರಡನೇ ಸೆಮಿಫೈನಲ್ ಬುಧವಾರ ನಡೆಯುತ್ತದೆ. ಆದರೆ ನಾಲ್ಕರ ಘಟ್ಟದಲ್ಲಿ ಭಾರತದ ಎದುರಾಳಿ ಯಾವುದು ಎನ್ನುವುದು ರವಿವಾರ ನಡೆಯುವ ಭಾರತ- ನ್ಯೂಜಿಲೆಂಡ್ ಪಂದ್ಯದ ಫಲಿತಾಂಶದ ಬಳಿಕವಷ್ಟೇ ಖಚಿತವಾಗಲಿದೆ. ಭಾರತ ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಪ್ರಯಾಣ ಬೆಳೆಸಬೇಕಾದ ತಂಡದ ವಿರುದ್ಧ ಇದು ಭಾರತದ ಮೇಲುಗೈಗೆ ಕಾರಣವಾಗಲಿದೆ.
ಶುಕ್ರವಾರ ರಾತ್ರಿ ಲಾಹೋರ್ ನಲ್ಲಿ ಮಳೆಯ ಕಾರಣದಿಂದ ಅಫ್ಘಾನಿಸ್ತಾನ ಜತೆಗಿನ ಪಂದ್ಯ ಫಲಿತಾಂಶವಿಲ್ಲದೇ ರದ್ದಾದ ಬೆನ್ನಲ್ಲೇ ಶನಿವಾರ ಆಸ್ಟ್ರೇಲಿಯಾ ತಂಡ ದುಬೈಗೆ ಪ್ರಯಾಣ ಬೆಳೆಸಲು ನಿರ್ಧರಿಸಿತು ಎಂದು ಪಿಟಿಐ ವರದಿ ಮಾಡಿದೆ. ದಕ್ಷಿಣ ಆಫ್ರಿಕಾ ಕೂಡಾ ರವಿವಾರ ದುಬೈ ತಲುಪಿದರೂ, ಯಾವ ತಂಡ ಭಾರತವನ್ನು ಸೆಮೀಸ್‍ನಲ್ಲಿ ಎದುರಿಸುತ್ತದೆ ಎನ್ನುವುದು ರವಿವಾರದ ಪಂದ್ಯ ಮುಗಿದ ಬಳಿಕವಷ್ಟೇ ಖಚಿತವಾಗುತ್ತದೆ. ಭಾರತವನ್ನು ಎದುರಿಸುವ ತಂಡ ಹೊರತುಪಡಿಸಿ ಮತ್ತೊಂದು ತಂಡ ತಕ್ಷಣವೇ ದುಬೈನಿಂದ ಪಾಕಿಸ್ತಾನಕ್ಕೆ ಮರಳಬೇಕಾಗುತ್ತದೆ. ನಿಯಮಾವಳಿ ಪ್ರಕಾರ ಎ ಗುಂಪಿನ ಅಗ್ರಸ್ಥಾನಿ ಬಿ ಗುಂಪಿನ ದ್ವಿತೀಯ ಸ್ಥಾನಿಯನ್ನು ಹಾಗೂ ಬಿ ಗುಂಪಿನ ಅಗ್ರಸ್ಥಾನಿ ಎ ಗುಂಪಿನ ದ್ವಿತೀಯ ಸ್ಥಾನಿಯನ್ನು ಸೆಮಿಫೈನಲ್‍ನಲ್ಲಿ ಎದುರಿಸಬೇಕಾಗುತ್ತದೆ.







