ಯುರೋ ಚಾಂಪಿಯನ್ ಶಿಪ್ | ಕೊನೆಯ ಕ್ಷಣದಲ್ಲಿ ವಾಟ್ಕಿನ್ಸ್ ಗೋಲು : ಇಂಗ್ಲೆಂಡ್ ಫೈನಲ್ ಗೆ ಲಗ್ಗೆ
ಪ್ರಶಸ್ತಿ ಸುತ್ತಿನಲ್ಲಿ ಎದುರಾಗಲಿದೆ ಅಜೇಯ ಸ್ಪೇನ್ ತಂಡದ ಸವಾಲು

PC : NDTV
ಬರ್ಲಿನ್: ಇಂಜುರಿ-ಟೈಮ್ನಲ್ಲಿ ಒಲಿ ವಾಟ್ಕಿನ್ಸ್ ಗಳಿಸಿದ ಆಕರ್ಷಕ ಗೋಲು ನೆರವಿನಿಂದ ಇಂಗ್ಲೆಂಡ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ 2-1 ಅಂತರದಿಂದ ರೋಚಕ ಜಯ ಸಾಧಿಸಿದೆ. ಈ ಮೂಲಕ ಸ್ಪೇನ್ ತಂಡ ವಿರುದ್ಧದ ಯುರೋ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಬುಧವಾರ ರಾತ್ರಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕಳಪೆ ಆರಂಭ ಪಡೆದಿತ್ತು. ಕ್ಸೇವಿ ಸಿಮನ್ಸ್ 7ನೇ ನಿಮಿಷದಲ್ಲಿ ನೆದರ್ಲ್ಯಾಂಡ್ಸ್ಗೆ ಮುನ್ನಡೆ ಒದಗಿಸಿಕೊಟ್ಟರು. ಇಂಗ್ಲೆಂಡ್ ಸತತ ಮೂರನೇ ಪಂದ್ಯದಲ್ಲಿ ಆರಂಭಿಕ ಹಿನ್ನಡೆ ಕಂಡಿತು.
ಡಚ್ ಡಿಫೆಂಡರ್ ಡೆಂಝಿಲ್ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಆಟಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಆರಂಭದಲ್ಲಿ ರೆಫರಿ ಫೆಲಿಕ್ಸ್ ಪೆನಾಲ್ಟಿ ನೀಡಲು ನಿರಾಕರಿಸಿದರು. ನಂತರ ವಿಎಆರ್ ಪರಿಶೀಲನೆಯ ನಂತರ ಪೆನಾಲ್ಟಿ ಕಾರ್ನರ್ ಅವಕಾಶ ನೀಡಿದರು. ಇಂಗ್ಲೆಂಡ್ ತಕ್ಷಣವೇ ತಿರುಗೇಟು ನೀಡಿತು. ಹ್ಯಾರಿ ಕೇನ್ ಪೆನಾಲ್ಟಿ ಕಾರ್ನರ್ ಅನ್ನು ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಸ್ಕೋರ್ 1-1ರಿಂದ ಸಮಬಲವಾಗಲು ನೆರವಾದರು. ಹ್ಯಾರಿ ಕೇನ್ 2022ರ ವಿಶ್ವಕಪ್ನಲ್ಲಿ ಫ್ರಾನ್ಸ್ ವಿರುದ್ಧದ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು.
ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಗುವ ಲಕ್ಷಣ ಕಂಡುಬಂದಾಗ ಕೇನ್ ಬದಲಿಗೆ ಅಡಿದ ವಾಟ್ಕಿನ್ಸ್ ಅವರು ಇನ್ನೋರ್ವ ಬದಲಿ ಆಟಗಾರ ಕೋಲ್ ಪಾಲ್ಮರ್ ನೀಡಿದ ಪಾಸ್ ನೆರವಿನಿಂದ 91ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಿದರು.
ಗರೆತ್ ಸೌತ್ಗೇಟ್ ಕೋಚಿಂಗ್ನಲ್ಲಿ ಇಂಗ್ಲೆಂಡ್ ತಂಡ ಸತತ ಎರಡನೇ ಬಾರಿ ಯುರೋಪಿಯನ್ ಚಾಂಪಿಯನ್ ಶಿಪ್ನಲ್ಲಿ ಫೈನಲ್ಗೆ ಪ್ರವೇಶಿಸಿದೆ. ಫೈನಲ್ ಹಾದಿಯಲ್ಲಿ ಸ್ಲೊವಾಕಿಯಾ ಹಾಗೂ ಸ್ವಿಟ್ಜರ್ಲ್ಯಾಂಡ್ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಕಡಿಮೆ ಅಂತರದಿಂದ ಜಯ ದಾಖಲಿಸಿತ್ತು.
ಮಂಗಳವಾರ ಫ್ರಾನ್ಸ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದ್ದ ಸ್ಪೇನ್ ತಂಡ ಫೈನಲ್ ಪಂದ್ಯಕ್ಕೆ ತಯಾರಿ ನಡೆಸಲು 24 ಗಂಟೆ ಕಾಲಾವಕಾಶ ಪಡೆದಿದೆ. 1966ರ ನಂತರ ಮೊದಲ ಬಾರಿ ಪ್ರಮುಖ ಟ್ರೋಫಿ ಜಯಿಸಬೇಕಾದರೆ ಅಜೇಯ ಗೆಲುವಿನ ಓಟದಲ್ಲಿರುವ ಸ್ಪೇನ್ ತಂಡದ ವಿರುದ್ಧ ಇಂಗ್ಲೆಂಡ್ ತನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ಅಗತ್ಯವಿದೆ.
ಉತ್ತಮ ಆರಂಭ ಪಡೆದ ಹೊರತಾಗಿಯೂ ನೆದರ್ಲ್ಯಾಂಡ್ಸ್ ತಂಡವು 1988ರಲ್ಲಿ ಜರ್ಮನಿಯಲ್ಲಿ ಗಳಿಸಿದ್ದ ಯಶಸ್ಸನ್ನು ಪುನರಾವರ್ತಿಸುವಲ್ಲಿ ಎಡವಿತು. ಪಂದ್ಯದ ಮೇಲೆ ಮರು ಹಿಡಿತ ಸಾಧಿಸುವ ಅವಕಾಶವನ್ನು ತಪ್ಪಿಸಿಕೊಂಡಿತು. ಇದರ ಲಾಭ ಪಡೆದ ಇಂಗ್ಲೆಂಡ್ ಪ್ರತಿರೋಧ ಒಡ್ಡಿತು.
ನಾನು ಇಂಗ್ಲೆಂಡ್ ಪರ ಯುರೋ ಕಪ್ ಟೂರ್ನಿಯಲ್ಲಿ ಆಡುತ್ತೇನೆ ಎಂದು ಯೋಚಿಸಿಯೇ ಇರಲಿಲ್ಲ.ನಿಸ್ಸಂಶಯವಾಗಿ ನೀವು ಕನಸು ಕಾಣಬಹುದು. ನನ್ನ ಪಾಲಿಗೆ ಕನಸು ನನಸಾಗಿದೆ ಎಂದು ಕೊನೆಯಕ್ಷಣದಲ್ಲಿ ಗೋಲು ಗಳಿಸಿದ ಇಂಗ್ಲೆಂಡ್ ಆಟಗಾರ ವ್ಯಾಟ್ಕಿನ್ಸ್ ಹೇಳಿದ್ದಾರೆ.







