FIFA World Cup 2026 | ವಿಶ್ವಕಪ್ ಗೆ ಮುನ್ನ ಇರಾನ್ ಅಭಿಮಾನಿಗಳ ಟಿಕೆಟ್ ರದ್ದು; FIFA ವಿರುದ್ಧ ಆಕ್ರೋಶ

ಸಾಂದರ್ಭಿಕ ಚಿತ್ರ (PTI)
ಟೆಹ್ರಾನ್: 2026ರ ಫಿಫಾ ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಇರಾನ್ ಅಭಿಮಾನಿಗಳಿಗೆ ಮೀಸಲಿಟ್ಟಿದ್ದ ಪಂದ್ಯದ ಟಿಕೆಟ್ ಕೋಟಾವನ್ನು ರದ್ದುಗೊಳಿಸಲಾಗಿದೆ ಎಂದು ಇರಾನ್ ಫುಟ್ಬಾಲ್ ಫೆಡರೇಶನ್ (FFIRI) ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದೆ.
ಈ ನಿರ್ಧಾರದಿಂದ ಪಂದ್ಯಗಳನ್ನು ವೀಕ್ಷಿಸಲು ಈಗಾಗಲೇ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾಕ್ಕೆ ಪ್ರಯಾಣದ ಯೋಜನೆ ಹಾಕಿಕೊಂಡಿದ್ದ ಅನೇಕ ಇರಾನಿನ ಅಭಿಮಾನಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಫೆಡರೇಶನ್ ತಿಳಿಸಿದೆ.
‘ಫಿಫಾ ಪ್ರಕಟಿಸಿದ್ದ ಅಧಿಕೃತ ಪ್ರಕ್ರಿಯೆಯನ್ನು ಅನುಸರಿಸಿ ಅಭಿಮಾನಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿ, ಪ್ರಯಾಣದ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು. ಆದರೂ ಈಗ ಟಿಕೆಟ್ ಹಂಚಿಕೆಯನ್ನು ಹಿಂತೆಗೆದುಕೊಳ್ಳಲಾಗಿದೆ’ ಎಂದು ಅದು ಹೇಳಿದೆ.
ವೀಸಾ ಸಮಸ್ಯೆಗಳು ಮತ್ತು ಅಮೆರಿಕ–ಇರಾನ್ ನಡುವಿನ ರಾಜಕೀಯ ಉದ್ವಿಗ್ನತೆಯಿಂದ ಇರಾನ್ನ ವಿಶ್ವಕಪ್ ಸಿದ್ಧತೆಗಳು ಈಗಾಗಲೇ ಸವಾಲುಗಳನ್ನು ಎದುರಿಸುತ್ತಿವೆ. ಇದರ ಬೆನ್ನಲ್ಲೇ ಅಭಿಮಾನಿಗಳ ಟಿಕೆಟ್ ಕೋಟಾ ರದ್ದತಿಯ ವಿಚಾರ ವಿವಾದಕ್ಕೆ ಕಾರಣವಾಗಿದೆ.
ಅಮೆರಿಕ ಮತ್ತು ಇರಾನ್ ನಡುವಿನ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದ ಸಂದರ್ಭದಲ್ಲಿ, ಮಾರ್ಚ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ರಾಷ್ಟ್ರೀಯ ತಂಡದ ವಿಶ್ವಕಪ್ ಭಾಗವಹಿಸುವಿಕೆ ಕುರಿತು ಪ್ರಶ್ನೆ ಎತ್ತಿದ್ದರು. ಈ ಹಿನ್ನೆಲೆಯಲ್ಲಿ, ತನ್ನ ಪಂದ್ಯಗಳನ್ನು ಅಮೆರಿಕದ ಹೊರಗೆ ನಡೆಸುವಂತೆ ಇರಾನ್ ಕೋರಿದ್ದರೂ, ಫಿಫಾ ಆ ಮನವಿಯನ್ನು ತಿರಸ್ಕರಿಸಿತ್ತು.
ಈ ನಡುವೆ, ಇರಾನ್ ತಂಡದ ಹಲವು ಆಟಗಾರರಿಗೆ ಮೊದಲ ಪಂದ್ಯದ ಕೇವಲ 10 ದಿನಗಳ ಮೊದಲು ವೀಸಾ ನೀಡಲಾಗಿತ್ತು. ಜೊತೆಗೆ, ಕೆಲ ಆಡಳಿತಾತ್ಮಕ ಸಿಬ್ಬಂದಿಗೆ ವೀಸಾ ನಿರಾಕರಿಸಲಾಗಿದೆ ಎಂದು ಇರಾನ್ ಫುಟ್ಬಾಲ್ ಫೆಡರೇಶನ್ ಆರೋಪಿಸಿತ್ತು.
ಇರಾನ್ ರಾಯಭಾರಿ ಅಲಿ ಪಸಂದಿದೇಹ್ ಅವರ ಪ್ರಕಾರ, ಟಿಜುವಾನಾಗೆ ತೆರಳಿದ್ದ 70 ಸದಸ್ಯರ ನಿಯೋಗದಲ್ಲಿ 15 ಮಂದಿಗೆ ಅಮೆರಿಕ ವೀಸಾ ನೀಡಲಾಗಿಲ್ಲ.






