FIFA World Cup 2026 | ಸತತ ವಿಶ್ವಕಪ್ ಪ್ರಶಸ್ತಿ ಗೆದ್ದ ಮೂರನೇ ತಂಡ ಎನಿಸಿಕೊಳ್ಳುವುದೇ Argentina?

Photo Credit : AP , PTI
ನ್ಯೂಯಾರ್ಕ್, ಜೂ.9: ವಿಶ್ವ ಕ್ರೀಡಾಹಬ್ಬ FIFA ವಿಶ್ವಕಪ್ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಇದ್ದು, ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್ ಬಾಲ್ ಪಂದ್ಯಾವಳಿಯು ಈ ಬಾರಿ ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಆದರೆ ಇತ್ತೀಚೆಗೆ ಬಲಿಷ್ಠ ತಂಡಗಳು ಬೆನ್ನುಬೆನ್ನಿಗೆ ಪ್ರಶಸ್ತಿ ಗೆಲ್ಲುವಲ್ಲಿ ಎಡವುತ್ತಾ ಬಂದಿವೆ.
ವಿಶ್ವಕಪ್ ಟೂರ್ನಿಯ ಸುದೀರ್ಘ ಇತಿಹಾಸದಲ್ಲಿ ಕೇವಲ ಎರಡು ಬಾರಿ ಮಾತ್ರ ಚಾಂಪಿಯನ್ ತಂಡವು ತನ್ನ ಟ್ರೋಫಿಯನ್ನು ಉಳಿಸಿಕೊಂಡಿದೆ. ಇಟಲಿ ಹಾಗೂ ಬ್ರೆಝಿಲ್ ತಂಡಗಳು ಈ ಸಾಧನೆ ಮಾಡಿವೆ. 1938ರಲ್ಲಿ ಇಟಲಿ ಈ ಸಾಧನೆ ಮಾಡಿದ ಮೊದಲ ತಂಡವಾಗಿತ್ತು. ಮೂರನೇ ಆವೃತ್ತಿಯ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಹಂಗೇರಿ ತಂಡವನ್ನು 4-2 ಅಂತರದಿಂದ ಮಣಿಸಿ ಸತತ ಪ್ರಶಸ್ತಿ ಜಯಿಸಿತ್ತು. ಇಟಲಿ ತಂಡವು 1934ರಲ್ಲಿ ತನ್ನ ಮೊದಲ ಪ್ರಶಸ್ತಿ ಗೆದ್ದುಕೊಂಡಿತ್ತು.
1958ರಲ್ಲಿ ತನ್ನ ಚೊಚ್ಚಲ ವಿಶ್ವಕಪ್ ಜಯಿಸಿದ್ದ ಬ್ರೆಝಿಲ್ ತಂಡವು 1962ರಲ್ಲಿ ಚಿಲಿಯಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಝೆಕೊಸ್ಲೋವಾಕಿಯಾ ತಂಡವನ್ನು 3-1 ಅಂತರದಿಂದ ಮಣಿಸಿ ಸತತ ಎರಡನೇ ಪ್ರಶಸ್ತಿಯನ್ನು ಜಯಿಸಿದ ಎರಡನೇ ತಂಡ ಎನಿಸಿಕೊಂಡಿತ್ತು. ವಿಶ್ವಕಪ್ ಇತಿಹಾಸದಲ್ಲಿ ಬ್ರೆಝಿಲ್ ತಂಡವು ಒಟ್ಟು ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಏಕೈಕ ತಂಡವಾಗಿದೆ.
1962ರ ನಂತರದ 15 ಆವೃತ್ತಿಗಳಲ್ಲಿ ಎಂಟು ತಂಡಗಳು ಟ್ರೋಫಿಗೆ ಮುತ್ತಿಟ್ಟಿವೆ. ಆದರೆ ಅದನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಅರ್ಜೆಂಟೀನಾ (1990), ಬ್ರೆಝಿಲ್ (1998) ಹಾಗೂ ಫ್ರಾನ್ಸ್ (2022) ತಂಡಗಳು ಸತತ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿ ಎಡವಿದ್ದವು.
1986ರಲ್ಲಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ತಂಡವು 1990ರಲ್ಲಿ ಸತತ ಎರಡನೇ ಬಾರಿ ಫೈನಲ್ ಗೆ ತಲುಪಿದ್ದರೂ ವೆಸ್ಟ್ ಜರ್ಮನಿ ತಂಡಕ್ಕೆ ಸೋತು ರನ್ನರ್–ಅಪ್ ಗೆ ತೃಪ್ತಿಪಟ್ಟುಕೊಂಡಿತ್ತು.
1994ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಬ್ರೆಝಿಲ್ ತಂಡವು 1998ರಲ್ಲಿ ಫೈನಲ್ ಗೆ ಲಗ್ಗೆ ಇಟ್ಟರೂ ಫ್ರಾನ್ಸ್ ತಂಡಕ್ಕೆ ಶರಣಾಗಿ ಪ್ರಶಸ್ತಿ ಕೈಚೆಲ್ಲಿತ್ತು.
2018ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದ ಫ್ರಾನ್ಸ್ ತಂಡವು 2022ರಲ್ಲಿ ಖತರ್ ನಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಫೈನಲ್ ತನಕ ತಲುಪಿದರೂ ಅರ್ಜೆಂಟೀನಾ ತಂಡಕ್ಕೆ ಶರಣಾಗಿ ಸತತ ಪ್ರಶಸ್ತಿಯಿಂದ ವಂಚಿತವಾಯಿತು.
ಸಾಂಪ್ರದಾಯಿಕವಾಗಿ ವಿಶ್ವಕಪ್ ಟೂರ್ನಿಯಲ್ಲಿ ಮಂದಗತಿಯ ಆರಂಭ ಪಡೆಯುವ ಇಟಲಿ ತಂಡವು 2010ರಲ್ಲಿ ಗ್ರೂಪ್ ಹಂತದಲ್ಲಿ ಎರಡರಲ್ಲಿ ಡ್ರಾ ಹಾಗೂ ಒಂದರಲ್ಲಿ ಸೋಲನುಭವಿಸಿತ್ತು.
2010ರಲ್ಲಿ ವಿಶ್ವಕಪ್ ಟ್ರೋಫಿಯನ್ನು ಜಯಿಸಿದ್ದ ಸ್ಪೇನ್ ತಂಡವು ನಾಲ್ಕು ವರ್ಷಗಳ ನಂತರ ನೆದರ್ಲೆಂಡ್ಸ್ ವಿರುದ್ಧ ತನ್ನ ಆರಂಭಿಕ ಪಂದ್ಯದಲ್ಲಿ 1-5 ಅಂತರದಿಂದ ಸೋಲನುಭವಿಸಿ ಆಘಾತ ಅನುಭವಿಸಿತ್ತು.
‘ಟೂರ್ನಮೆಂಟ್ ಟೀಮ್’ ಎಂದು ಸ್ವತಃ ಹೆಮ್ಮೆಪಡುತ್ತಿದ್ದ ಜರ್ಮನಿ ತಂಡವು 2018ರಲ್ಲಿ ಗ್ರೂಪ್ ಹಂತದಲ್ಲೇ ಮುಗ್ಗರಿಸಿತ್ತು.
ಅರ್ಜೆಂಟೀನಾ ತಂಡವು 2022ರಲ್ಲಿ ವಿಶ್ವಕಪ್ ಗೆದ್ದಿದ್ದ ತಂಡದ 26 ಆಟಗಾರರ ಪೈಕಿ 17 ಆಟಗಾರರನ್ನು ಈ ಬಾರಿಯ ವಿಶ್ವಕಪ್ಗೆ ಆಯ್ಕೆ ಮಾಡಿದೆ. 38 ವರ್ಷದ ಲಿಯೊನೆಲ್ ಮೆಸ್ಸಿ ಅಮೆರಿಕದಲ್ಲಿ ತನ್ನ ಜಾದೂ ತೋರಿಸಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.
►ಗರಿಷ್ಠ ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿರುವ ತಂಡಗಳು
1. ಬ್ರೆಝಿಲ್ – ಐದು ಪ್ರಶಸ್ತಿಗಳು
2. ಜರ್ಮನಿ – ನಾಲ್ಕು ಪ್ರಶಸ್ತಿಗಳು
3. ಇಟಲಿ – ನಾಲ್ಕು ಪ್ರಶಸ್ತಿಗಳು
4. ಅರ್ಜೆಂಟೀನಾ – ಮೂರು ಪ್ರಶಸ್ತಿಗಳು
5. ಫ್ರಾನ್ಸ್ – ಎರಡು ಪ್ರಶಸ್ತಿಗಳು
6. ಉರುಗ್ವೆ – ಎರಡು ಪ್ರಶಸ್ತಿಗಳು
7. ಇಂಗ್ಲೆಂಡ್ – ಒಂದು ಪ್ರಶಸ್ತಿ
8. ಸ್ಪೇನ್ – ಒಂದು ಪ್ರಶಸ್ತಿ
►ಬ್ರೆಝಿಲ್
• ವಿಶ್ವಕಪ್ ನಲ್ಲಿ 22 ಬಾರಿ ಭಾಗವಹಿಸಿದೆ
• ಎಂಟು ಬಾರಿ ಸೆಮಿಫೈನಲ್ ಗೆ ತಲುಪಿದೆ
• ಆರು ಬಾರಿ ಫೈನಲ್ ಗೆ ತಲುಪಿದೆ
• ಐದು ಪ್ರಶಸ್ತಿಗಳು (1958, 1962, 1970, 1994, 2002)
►ಜರ್ಮನಿ
• 20 ಬಾರಿ ಭಾಗವಹಿಸಿದೆ
• 12 ಬಾರಿ ಸೆಮಿಫೈನಲ್ ಗೆ ತಲುಪಿದೆ
• ಎಂಟು ಬಾರಿ ಫೈನಲ್ ಗೆ ತಲುಪಿದೆ
• ನಾಲ್ಕು ಪ್ರಶಸ್ತಿಗಳು (1954, 1974, 1990, 2014)
►ಇಟಲಿ
• 18 ಬಾರಿ ಭಾಗವಹಿಸಿದೆ
• ಏಳು ಬಾರಿ ಸೆಮಿಫೈನಲ್ ಗೆ ತಲುಪಿದೆ
• ಆರು ಬಾರಿ ಫೈನಲ್ ಗೆ ತಲುಪಿದೆ
• ನಾಲ್ಕು ಪ್ರಶಸ್ತಿಗಳು (1934, 1938, 1982, 2006)
►ಅರ್ಜೆಂಟೀನಾ
• 18 ಬಾರಿ ಭಾಗವಹಿಸಿದೆ
• ಐದು ಬಾರಿ ಸೆಮಿಫೈನಲ್ ಗೆ ತಲುಪಿದೆ
• ಆರು ಬಾರಿ ಫೈನಲ್ ಗೆ ತಲುಪಿದೆ
• ಮೂರು ಪ್ರಶಸ್ತಿಗಳು (1978, 1986, 2022)
ಫ್ರಾನ್ಸ್
• 16 ಬಾರಿ ಭಾಗವಹಿಸಿದೆ
• ಏಳು ಬಾರಿ ಸೆಮಿಫೈನಲ್ ಗೆ ತಲುಪಿದೆ
• ನಾಲ್ಕು ಬಾರಿ ಫೈನಲ್ ಗೆ ತಲುಪಿದೆ
• ಎರಡು ಪ್ರಶಸ್ತಿಗಳು (1998, 2018)
►ಉರುಗ್ವೆ
• 14 ಬಾರಿ ಭಾಗವಹಿಸಿದೆ
• ನಾಲ್ಕು ಬಾರಿ ಸೆಮಿಫೈನಲ್ ಗೆ ತಲುಪಿದೆ
• ಎರಡು ಬಾರಿ ಫೈನಲ್ ಗೆ ತಲುಪಿದೆ
• ಎರಡು ಪ್ರಶಸ್ತಿಗಳು (1930, 1950)
►ಇಂಗ್ಲೆಂಡ್
• 16 ಬಾರಿ ಭಾಗವಹಿಸಿದೆ
• ಮೂರು ಬಾರಿ ಸೆಮಿಫೈನಲ್ ಗೆ ತಲುಪಿದೆ
• ಒಂದು ಬಾರಿ ಫೈನಲ್ ಗೆ ತಲುಪಿದೆ
• ಒಂದು ಪ್ರಶಸ್ತಿ (1966)
►ಸ್ಪೇನ್
• 16 ಬಾರಿ ಭಾಗವಹಿಸಿದೆ
• ಒಂದು ಬಾರಿ ಸೆಮಿಫೈನಲ್ ಗೆ ತಲುಪಿದೆ
• ಒಂದು ಬಾರಿ ಫೈನಲ್ ಗೆ ತಲುಪಿದೆ
• ಒಂದು ಪ್ರಶಸ್ತಿ (2010)






