FIFA World Cup 2026 | ರೆಫರಿಯಾಗಿ ಆಯ್ಕೆಯಾಗಿರುವ ಸೊಮಾಲಿಯಾದ ಉಮರ್ ಗೆ ಅಮೆರಿಕ ಪ್ರವೇಶ ನಿರಾಕರಣೆ

ಉಮರ್ ಅರ್ಟನ್ | Photo Credit : AP
ನ್ಯೂಯಾರ್ಕ್, ಜೂ.9: FIFA ವಿಶ್ವಕಪ್ ನಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದ ಸೊಮಾಲಿಯಾದ ರೆಫರಿ ಉಮರ್ ಅರ್ಟನ್ ಅವರಿಗೆ ಅಮೆರಿಕ ಪ್ರವೇಶ ನಿರಾಕರಿಸಲಾಗಿದೆ. ಫುಟ್ಬಾಲ್ ನ ಅತಿ ದೊಡ್ಡ ಟೂರ್ನಿಯಲ್ಲಿ ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸಿದ ಸೊಮಾಲಿಯಾದ ಮೊದಲ ವ್ಯಕ್ತಿ ಎನಿಸಿಕೊಳ್ಳುವ ಉಮರ್ ಅವರ ಆಸೆಗೆ ಇದರಿಂದ ತಣ್ಣೀರು ಬಿದ್ದಿದೆ.
2025ರಲ್ಲಿ ಆಫ್ರಿಕಾದ ಅತ್ಯುತ್ತಮ ರೆಫರಿ ಎಂದು ಹೆಸರಿಸಲ್ಪಟ್ಟಿದ್ದ ಉಮರ್ ಅರ್ಟನ್ ಅವರನ್ನು ಮಯಾಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಮೆರಿಕದ ಕಸ್ಟಮ್ಸ್ ಹಾಗೂ ಗಡಿ ರಕ್ಷಣೆ (CBP) ಅಧಿಕಾರಿಗಳು ತಡೆಹಿಡಿದಿದ್ದರು.
ಏಜೆನ್ಸಿಯ ಪ್ರಮಾಣಿತ ಕಸ್ಟಮ್ಸ್ ಪ್ರಕ್ರಿಯೆಯ ಭಾಗವಾಗಿ ಅರ್ಟನ್ ಅವರನ್ನು ಹೆಚ್ಚುವರಿ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ CBP ತಿಳಿಸಿದೆ.
‘ತಪಾಸಣೆಯ ನಂತರ FIFA ವಿಶ್ವಕಪ್ ನ ರೆಫರಿಯಾಗಿದ್ದ ಪ್ರಯಾಣಿಕನಿಗೆ ಅಮೆರಿಕ ಪ್ರವೇಶ ನಿರಾಕರಿಸಲಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
FIFA ವಿಶ್ವಕಪ್ ಗಾಗಿ ಸಿದ್ಧಪಡಿಸಿದ ಪಂದ್ಯ ಅಧಿಕಾರಿಗಳ ಪಟ್ಟಿಯಲ್ಲಿ ಸೊಮಾಲಿಯಾದಿಂದ ಆಯ್ಕೆಯಾಗಿದ್ದ ಏಕೈಕ ರೆಫರಿ ಅರ್ಟನ್ ಆಗಿದ್ದರು. 2025ರ ಜೂನ್ 9ರಿಂದ ಸೊಮಾಲಿಯಾವನ್ನು ಅಮೆರಿಕದ ಸಂಪೂರ್ಣ ಪ್ರಯಾಣ ನಿರ್ಬಂಧಗಳನ್ನು ಎದುರಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ವರದಿಗಳ ಪ್ರಕಾರ, ಉಮರ್ ಅವರು ವೀಸಾ ಹಾಗೂ ರಾಜತಾಂತ್ರಿಕ ಪಾಸ್ಪೋರ್ಟ್ ಎರಡನ್ನೂ ಹೊಂದಿದ್ದರು. ಆದರೆ ಅವು ಪ್ರವೇಶಕ್ಕೆ ಸಾಕಾಗುವುದಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಪರಿಗಣಿಸಿದ್ದಾರೆ.
ಸೊಮಾಲಿಯಾದ ಯುವಜನ ಮತ್ತು ಕ್ರೀಡಾ ಸಚಿವಾಲಯದ ಹಿರಿಯ ಸಲಹೆಗಾರ ಅಮೆರಿಕದ ನಿರ್ಧಾರವನ್ನು ಟೀಕಿಸಿದ್ದಾರೆ.
‘ಉಮರ್ ಅರ್ಟನ್ ಆಫ್ರಿಕಾದ ಅತ್ಯಂತ ಗೌರವಾನ್ವಿತ ರೆಫರಿಗಳಲ್ಲಿ ಒಬ್ಬರು. ಅವರು ಇಡೀ ಫುಟ್ಬಾಲ್ ಸಮುದಾಯದ ಬೆಂಬಲಕ್ಕೆ ಅರ್ಹರು. ಅವರಿಗೆ ಅಮೆರಿಕ ಪ್ರವೇಶ ನಿರಾಕರಿಸುವುದು ಹಾಗೂ ನಿಗದಿತ ಪಂದ್ಯಗಳಲ್ಲಿ ರೆಫರಿ ಮಾಡದಂತೆ ತಡೆಯುವುದು ವೈಯಕ್ತಿಕವಾಗಿ ಮಾತ್ರವಲ್ಲದೆ, ಕ್ರೀಡಾ ಮನೋಭಾವಕ್ಕೂ ಹಾಗೂ ಫುಟ್ಬಾಲ್ ನ ಬದ್ಧತೆಗೂ ಧಕ್ಕೆ ಉಂಟುಮಾಡುತ್ತದೆ’ ಎಂದು ಅವರು ಹೇಳಿದ್ದಾರೆ.
ಅರ್ಟನ್ ಈ ಹಿಂದೆ 2023ರ ಆಫ್ರಿಕಾ ಕಪ್ ಆಫ್ ನೇಶನ್ಸ್ ನಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದ್ದರು. 2025ರಲ್ಲಿ ಆಫ್ರಿಕಾದ ಅತ್ಯುತ್ತಮ ರೆಫರಿ ಎಂಬ ಗೌರವಕ್ಕೂ ಪಾತ್ರರಾಗಿದ್ದರು.






