ಭಾರತದ ಮಾಜಿ ಆಟಗಾರ, ಕೋಚ್ ಅಂಶುಮಾನ್ ಗಾಯಕ್ವಾಡ್ ನಿಧನ

ಅಂಶುಮಾನ್ ಗಾಯಕ್ವಾಡ್ | PC : PTI
ವಡೋದರ: ಭಾರತದ ಮಾಜಿ ಆರಂಭಿಕ ಆಟಗಾರ ಹಾಗೂ ಟೀಮ್ ಇಂಡಿಯಾದ ಕೋಚ್ ಆಗಿದ್ದ ಅಂಶುಮಾನ್ ಗಾಯಕ್ವಾಡ್(71 ವರ್ಷ)ಬುಧವಾರ ರಾತ್ರಿ ನಿಧನರಾಗಿದ್ದಾರೆ. ಅವರು ಒಂದು ವರ್ಷದಿಂದ ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದರು.
ಕಳೆದ ವರ್ಷ ಜೂನ್ನಲ್ಲಿ ಅವರಿಗೆ ರೋಗ ಪತ್ತೆಯಾಗಿದ್ದು, ಲಂಡನ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಗಾಯಕ್ವಾಡ್ ರಾತ್ರಿ 9:30ರ ಸುಮಾರಿಗೆ ನಿಧನರಾಗಿದ್ದಾರೆ. ಭಾರತೀಯ ಕ್ರಿಕೆಟಿಗೆ ಗಾಯಕ್ವಾಡ್ ಕೊಡುಗೆ ಅಪಾರ ಎಂದು ಬರೋಡಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸತ್ಯಜಿತ್ ಗಾಯಕ್ವಾಡ್ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಡಿ.ಕೆ. ಗಾಯಕ್ವಾಡ್ ಪುತ್ರನಾಗಿರುವ ಅಂಶುಮಾನ್ 22 ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ಜೀವನದಲ್ಲಿ 206 ಪಂದ್ಯಗಳನ್ನು ಆಡಿ 12,136 ರನ್ ಗಳಿಸಿದ್ದರು. 1974ರಲ್ಲಿ ಕೋಲ್ಕತಾದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಭಾರತದ ಪರ 40 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳನ್ನು ಆಡಿದ್ದ ಗಾಯಕ್ವಾಡ್ ಟೆಸ್ಟ್ ಪಂದ್ಯದಲ್ಲಿ 2 ಶತಕಗಳ ಸಹಿತ ಒಟ್ಟು 1,985 ರನ್ ಗಳಿಸಿದ್ದರು. 15 ಏಕದಿನ ಪಂದ್ಯದಲ್ಲಿ ಒಟ್ಟು 269 ರನ್ ಗಳಿಸಿದ್ದರು. ಗಾಯಕ್ವಾಡ್ 1997 ಹಾಗೂ 2000ರಲ್ಲಿ ಎರಡು ಬಾರಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಅಗಿದ್ದರು. ಭಾರತ ತಂಡದ ಆಯ್ಕೆಗಾರ, ಮ್ಯಾನೇಜರ್ ಹಾಗೂ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಗಾಯಕ್ವಾಡ್ ಕೋಚಿಂಗ್ನಲ್ಲಿ ಭಾರತವು 2000ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ಸ್ ಅಪ್ ಆಗಿತ್ತು.
ಕೆಲವು ತಿಂಗಳ ಹಿಂದೆ ಕ್ಯಾನ್ಸರ್ ಚಿಕಿತ್ಸೆಗಾಗಿ ಗಾಯಕ್ವಾಡ್ ಅವರು ಲಂಡನ್ನ ಕಿಂಗ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬಿಸಿಸಿಐ ಇತ್ತೀಚೆಗೆ 1ಕೋ.ರೂ. ಆರ್ಥಿಕ ನೆರವು ಘೋಷಿಸಿತ್ತು. ಭಾರತದ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಕೂಡ ಗಾಯಕ್ವಾಡ್ಗೆ ನೆರವು ನೀಡಿದ್ದರು.
►ಪ್ರಧಾನಿ ಮೋದಿ, ಗಂಭೀರ್, ಹರ್ಭಜನ್ ಸಹಿತ ಹಲವರಿಂದ ಕಂಬನಿ
ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕಂಬನಿ ಮಿಡಿದಿದ್ದಾರೆ.
ಅಂಶುಮಾನ್ ಗಾಯಕ್ವಾಡ್ಜೀ ಕ್ರಿಕೆಟಿಗೆ ತನ್ನ ಕೊಡುಗೆಯ ಮೂಲಕ ಸದಾ ಸ್ಮರಣೀಯರು. ಅವರೊಬ್ಬ ಶ್ರೇಷ್ಠ ಆಟಗಾರ ಹಾಗೂ ಕೋಚ್ ಆಗಿದ್ದರು. ಅವರ ನಿಧನದಿಂದ ದುಃಖಿತನಾಗಿರುವೆ. ಅವರ ಕುಟುಂಬದವರಿಗೆ ಸಾಂತ್ವಾನ ಹೇಳುವೆ ಎಂದು ಮೋದಿ ಟ್ವೀಟಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ, ಅವರ ಪುತ್ರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗಾಯಕ್ವಾಡ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು







