ನಾಯಕತ್ವದಿಂದ ಮುಕ್ತರಾಗಿರುವ ರೋಹಿತ್ ಇನ್ನಷ್ಟು ಸ್ವತಂತ್ರವಾಗಿ ಆಡಬಹುದು : ಫಿಂಚ್

ರೋಹಿತ್ ಶರ್ಮಾ, ಆ್ಯರೊನ್ ಫಿಂಚ್ | Photo: X
ಹೊಸದಿಲ್ಲಿ : ನಾಯಕತ್ವದ ಜವಾಬ್ದಾರಿಯಿಂದ ಮುಕ್ತರಾಗಿರುವ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಇನ್ನಷ್ಟು ಸ್ವತಂತ್ರವಾಗಿ ಆಡಬಹುದು. ಇದು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ ಲಾಭ ತರಬಹುದು ಎಂದು ಆಸ್ಟ್ರೇಲಿಯದ ಮಾಜಿ ನಾಯಕ ಆ್ಯರೊನ್ ಫಿಂಚ್ ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದಲ್ಲಿ ಎರಡು ವರ್ಷಗಳ ಕಾಲ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಎರಡು ಬಾರಿ ಐಪಿಎಲ್ ಫೈನಲ್ ಗೆ ಪ್ರವೇಶಿಸಿದ್ದರು. 2022ರಲ್ಲಿ ಗುಜರಾತ್ ಗೆ ಚೊಚ್ಚಲ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಆಲ್ ರೌಂಡರ್ ಪಾಂಡ್ಯ ಮುಂಬೈ ಇಂಡಿಯನ್ಸ್ ಗೆ ವಾಪಸಾಗಿದ್ದು, ರೋಹಿತ್ ಶರ್ಮಾರ ಬದಲಿಗೆ ನಾಯಕನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಹಾರ್ದಿಕ್ ಅತ್ಯಂತ ಯಶಸ್ವಿ ನಾಯಕ ರೋಹಿತ್ ರಿಂದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಭವಿಷ್ಯದ ಯೋಜನೆಯ ಭಾಗವಾಗಿ ನಾಯಕತ್ವದ ಬದಲಾವಣೆ ಮಾಡಲಾಗಿದ ಎಂದು ಮುಂಬೈ ಫ್ರಾಂಚೈಸಿ ಸ್ಪಷ್ಟಪಡಿಸಿದೆ.
ಭಾರತ ಹಾಗೂ ಮುಂಬೈ ಪರ ಹಲವಾರು ವರ್ಷಗಳಿಂದ ಬ್ಯಾಟಿಂಗ್ ಆರಂಭಿಸುತ್ತಿರುವ ರೋಹಿತ್ ಹೆಗಲಿನಿಂದ ನಾಯಕತ್ವದ ಭಾರ ಕಡಿಮೆಯಾಗಿದೆ. ನೀವು ನಿರಂತರವಾಗಿ ತಂಡದ ನಾಯಕತ್ವವಹಿಸಿದರೆ ನೀವು ಎಲ್ಲೇ ಹೋದರೂ ತಂಡದ ನಾಯಕನಾಗಿರುತ್ತೀರಿ. ಇದೀಗ ರೋಹಿತ್ ಮುಕ್ತವಾಗಿ ಬ್ಯಾಟಿಂಗ್ಗೆ ತೆರಳಬಹುದು. ಇದು ರೋಹಿತ್ ಗೆ ವೈಯಕ್ತಿಕವಾಗಿ ಹಾಗೂ ಮುಂಬೈ ಇಂಡಿಯನ್ಸ್ ಗೆ ಲಾಭ ತಂದುಕೊಡಲಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ನ ಕಾರ್ಯಕ್ರಮ ಗೇಮ್ ಪ್ಲ್ಯಾನ್ನಲ್ಲಿ ಫಿಂಚ್ ಹೇಳಿದ್ದಾರೆ.
ಕಳೆದ ಬಾರಿಯ ಐಪಿಎಲ್ ನಲ್ಲಿ ಏಳನೇ ಸ್ಥಾನ ಪಡೆದಿರುವ ಎರಡು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಸೇರ್ಪಡೆಯ ಕಾರಣಕ್ಕೆ ಈ ಬಾರಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಫಿಂಚ್ ಹೇಳಿದ್ದಾರೆ.
ಕೆಕೆಆರ್ ಕಳೆದ ವರ್ಷದ ಪ್ರದರ್ಶನವನ್ನು ಸುಧಾರಿಸಬಹುದು. ಕಳೆದ ವರ್ಷ ಕೆಕೆಆರ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಶ್ರೇಯಸ್ ಅಯ್ಯರ್ ಗಾಯಗೊಂಡಿರುವುದು ಟೂರ್ನಮೆಂಟ್ ನಲ್ಲಿ ಹೇಗೆ ಪರಿಣಾಮಬೀರಲಿದೆ ಎನ್ನುವುದನ್ನು ನೋಡುವುದು ಆಸಕ್ತಿಯ ವಿಚಾರವಾಗಿದೆ ಎಂದು ಕೆಕೆಆರ್ ಸಹಿತ 8 ಐಪಿಎಲ್ ತಂಡಗಳನ್ನು ಪ್ರತಿನಿಧಿಸಿರುವ ಫಿಂಚ್ ಹೇಳಿದ್ದಾರೆ.







