ಫ್ರೆಂಚ್ ಓಪನ್: ಮೊದಲ ಸುತ್ತಿನಲ್ಲಿ ಸಾತ್ವಿಕ್-ಚಿರಾಗ್, ಟ್ರೀಸಾ-ಗಾಯತ್ರಿಗೆ ಗೆಲುವು

ಟ್ರೀಸಾ-ಗಾಯತ್ರಿ | Photo:X
ಪ್ಯಾರಿಸ್: ಭಾರತದ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ದ್ವಿತೀಯ ಸುತ್ತಿಗೆ ತಲುಪಿದ್ದಾರೆ.
ಮಂಗಳವಾರ ನಡೆದ ಮೊದಲ ಸುತ್ತಿನ ಪುರುಷರ ಡಬಲ್ಸ್ ಪಂದ್ಯದಲ್ಲಿ ವಿಶ್ವದ ನಂ.1 ಜೋಡಿ ಸಾತ್ವಿಕ್ ಹಾಗೂ ಚಿರಾಗ್ ಮಲೇಶ್ಯದ ಆಂಗ್ ಯೀವ್ ಸಿನ್ ಹಾಗೂ ಟಿಯೊ ಯಿ ಅವರನ್ನು 47 ನಿಮಿಷಗಳ ಹೋರಾಟದಲ್ಲಿ 21-13, 24-22 ನೇರ ಗೇಮ್ ಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದರು.
ಕಳೆದ ಮೂರು ಟೂರ್ನಮೆಂಟ್ ಗಳಲ್ಲಿ ಎರಡನೇ ಶ್ರೇಷ್ಠ ಪ್ರದರ್ಶನ ನೀಡಿರುವ ಏಶ್ಯನ್ ಗೇಮ್ಸ್ ಚಾಂಪಿಯನ್ ಗಳಾದ ಸಾತ್ವಿಕ್ ಹಾಗೂ ಚಿರಾಗ್ ಮುಂದಿನ ಸುತ್ತಿನಲ್ಲಿ ಮಲೇಶ್ಯದ ಇನ್ನೊಂದು ಜೋಡಿ ಮಾನ್ ವೀ ಚೊಂಗ್ ಹಾಗೂ ಕೈ ವುನ್ ಟೀ ಅವರನ್ನು ಎದುರಿಸಲಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ವಿಜೇತರಾದ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಕೂಡ ಎರಡನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಭಾರತದ ಟ್ರೀಸಾ ಹಾಗೂ ಗಾಯತ್ರಿ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ತಮ್ಮದೇ ದೇಶದ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ ಕ್ರಾಸ್ಟೊರನ್ನು 16-21, 21-19, 21-17 ಗೇಮ್ ಗಳ ಅಂತರದಿಂದ ಸೋಲಿಸಿದ್ದಾರೆ.
ಈ ಎರಡು ಜೋಡಿ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಹೋರಾಟ ನಡೆಸುತ್ತಿವೆ. ಒಲಿಂಪಿಕ್ ಗೇಮ್ಸ್ ಅರ್ಹತಾ ರ್ಯಾಂಕಿಂಗ್ನಲ್ಲಿ ತನಿಶಾ-ಅಶ್ವಿನಿ 11ನೇ ರ್ಯಾಂಕಿನಲ್ಲಿದ್ದರೆ, ಟ್ರೀಸಾ-ಗಾಯತ್ರಿ 14ನೇ ಸ್ಥಾನದಲ್ಲಿದ್ದಾರೆ.
ಟ್ರೀಸಾ ಹಾಗೂ ಗಾಯತ್ರಿ ಸದ್ಯ ಭರ್ಜರಿ ಫಾರ್ಮ್ನಲ್ಲಿದ್ದು ಕಳೆದ ತಿಂಗಳು ಮಲೇಶ್ಯದ ಶಾ ಆಲಂನಲ್ಲಿ ನಡೆದಿರುವ ಬ್ಯಾಡ್ಮಿಂಟನ್ ಏಶ್ಯನ್ ಟೀಮ್ ಚಾಂಪಿಯನ್ ಶಿಪ್ನಲ್ಲಿ ಮಹಿಳೆಯರ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.







