ಫ್ರೆಂಚ್ ಓಪನ್ | ಸತತ ಮೂರನೇ ಬಾರಿ ಪ್ರಶಸ್ತಿ ಗೆದ್ದ ವಿಶ್ವದ ನಂ.1 ಆಟಗಾರ್ತಿ ಸ್ವಿಯಾಟೆಕ್

ಇಗಾ ಸ್ವಿಯಾಟೆಕ್ | PC : NDTV
ಪ್ಯಾರಿಸ್ : ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಇಟಲಿಯ ಜಾಸ್ಮಿನ್ ಪಯೊಲಿನಿ ಅವರನ್ನು ನೇರ ಸೆಟ್ಗಳ ಅಂತರದಿಂದ ಸದೆಬಡಿದಿರುವ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಸತತ ಮೂರನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಶನಿವಾರ ಕೇವಲ 68 ನಿಮಿಷಗಳಲ್ಲಿ ಕೊನೆಗೊಂಡಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸ್ವಿಯಾಟೆಕ್ ಅವರು ಜಾಸ್ಮಿನ್ರನ್ನು 6-2, 6-1 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ನಾಲ್ಕನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಬಾಚಿಕೊಂಡರು.
ಏಕಪಕ್ಷೀಯವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಸುಲಭ ಗೆಲುವು ಪಡೆದ ಸ್ವಿಯಾಟೆಕ್ ಐದನೇ ಬಾರಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ತನ್ನದಾಗಿಸಿಕೊಂಡರು.
23ರ ಹರೆಯದ ಸ್ವಿಯಾಟೆಕ್ ಇದೀಗ ತಾನಾಡಿರುವ ಎಲ್ಲ ಐದು ಗ್ರ್ಯಾನ್ಸ್ಲಾಮ್ ಫೈನಲ್ನಲ್ಲಿ ಜಯ ಸಾಧಿಸಿದ್ದಾರೆ. 2022ರ ಯು.ಎಸ್. ಓಪನ್ ಫೈನಲ್ನಲ್ಲೂ ಸ್ವಿಯಾಟೆಕ್ ಜಯ ಸಾಧಿಸಿದ್ದರು.
ಸ್ವಿಯಾಟೆಕ್ 12ನೇ ಶ್ರೇಯಾಂಕದ ಜಾಸ್ಮಿನ್ರನ್ನು ಫೈನಲ್ನಲ್ಲಿ ಎದುರಿಸುವ ಮೊದಲು ಫ್ರೆಂಚ್ ಓಪನ್ನಲ್ಲಿ ಸತತ 20 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಜಾಸ್ಮಿನ್ ತನ್ನ 28ನೇ ವಯಸ್ಸಿನಲ್ಲಿ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಫೈನಲ್ನಲ್ಲಿ ಸ್ಪರ್ಧಿಸಿದ್ದಾರೆ.
ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ತನಕ ಇಟಲಿ ಆಟಗಾರ್ತಿ 4 ಪ್ರಮುಖ ಟೆನಿಸ್ ಟೂರ್ನಿಗಳಲ್ಲಿ ಎರಡನೇ ಸುತ್ತನ್ನೂ ದಾಟಿರಲಿಲ್ಲ. ಈ ಟೂರ್ನಿಯಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿರುವ ಸ್ವಿಯಾಟೆಕ್ ಕೇವಲ ಒಂದು ಸೆಟ್ಟನ್ನು ಮಾತ್ರ ಸೋತಿದ್ದಾರೆ.







