ಜರ್ಮನಿ ನಾಯಕ ಗುಂಡೋಗನ್ ಅಂತರರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿ

ಇಲ್ಕೆ ಗುಂಡೋಗನ್ | PC : NDTV
ಬರ್ಲಿನ್ : ಯುರೋ 2024ರಲ್ಲಿ ತನ್ನ ದೇಶವನ್ನು ಮುನ್ನಡೆಸಿದ್ದ ಜರ್ಮನಿ ತಂಡದ ನಾಯಕ ಇಲ್ಕೆ ಗುಂಡೋಗನ್ ಅಂತರರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗುವುದಾಗಿ ಸೋಮವಾರ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ನಾಲ್ಕು ಪ್ರಮುಖ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿರುವ ಗುಂಡೋಗನ್ 13 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ನನ್ನ ರಾಷ್ಟ್ರೀಯ ತಂಡದ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಿದೆ. ನನ್ನ ತಾಯ್ನಾಡಿನ ಪರ 82 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದನ್ನು ನಾನು ಹೆಮ್ಮೆಯಿಂದ ಸ್ಮರಿಸಿಕೊಳ್ಳುವೆ. 2011ರಲ್ಲಿ ಹಿರಿಯರ ತಂಡಕ್ಕೆ ಪಾದಾರ್ಪಣೈಗೈದಾಗ 82 ಪಂದ್ಯಗಳನ್ನು ಆಡುತ್ತೇನೆಂದು ಕನಸಲ್ಲೂ ಯೋಚಿಸಿರಲಿಲ್ಲ ಎಂದು ಜರ್ಮನಿ ಫುಟ್ಬಾಲ್ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಗುಂಡೋಗನ್ ಹೇಳಿದ್ದಾರೆ.
ಅಕ್ಟೋಬರ್ ನಲ್ಲಿ 34ನೇ ವಯಸ್ಸಿಗೆ ಕಾಲಿಡಲಿರುವ ಗುಂಡೋಗನ್, ಯರೋ 2024ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಜರ್ಮನಿ ತಂಡದ ನಾಯಕತ್ವವಹಿಸಿದ್ದರು. ಜರ್ಮನಿ ತಂಡಯು ಅಂತಿಮ-8ರ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಸ್ಪೇನ್ ತಂಡಕ್ಕೆ ಶರಣಾಗಿತ್ತು.
ನಮ್ಮ ತವರಿನಲ್ಲಿ ನಡೆದ ಯುರೋಪಿಯನ್ ಚಾಂಪಿಯನ್ ಶಿಪ್ ನಲ್ಲಿ ಜರ್ಮನಿ ತಂಡವನ್ನು ನಾಯಕನಾಗಿ ಮುನ್ನಡೆಸುವ ಮಹಾ ಗೌರವ ನನಗೆ ಲಭಿಸಿತ್ತು ಎಂದು ಬಾರ್ಸಿಲೋನದ ಮಿಡ್ಫೀಲ್ಡರ್ ಹೇಳಿದ್ದಾರೆ.
ಗುಂಡೋಗನ್ 2011ರ ಅಕ್ಟೋಬರ್ ನಲ್ಲಿ ಬೆಲ್ಜಿಯಮ್ ವಿರುದ್ಧ ಪಂದ್ಯದಲ್ಲಿ ಜರ್ಮನಿ ಪರ ಚೊಚ್ಚಲ ಪಂದ್ಯ ಆಡಿದ್ದರು. ಆದರೆ ಬೆನ್ನುನೋವಿನ ಕಾರಣಕ್ಕೆ 2014ರ ವಿಶ್ವಕಪ್ನಲ್ಲಿ ಆಡುವುದರಿಂದ ವಂಚಿತರಾಗಿದ್ದರು. ಮಂಡಿನೋವಿನ ಕಾರಣಕ್ಕೆ 2016ರ ಯುರೋ ಕಪ್ನಿಂದಲೂ ದೂರ ಉಳಿದಿದ್ದರು. ಜರ್ಮನಿ ಪರ 82 ಪಂದ್ಯಗಳನ್ನು ಆಡಿದ್ದ ಗುಂಡೋಗನ್ ಒಟ್ಟು 19 ಗೋಲುಗಳನ್ನು ಗಳಿಸಿದ್ದರು. ಗುಂಡೋಗನ್ ಅವರು ರಾಷ್ಟ್ರೀಯ ತಂಡದ ನಾಯಕತ್ವವಹಿಸಿದ ಟರ್ಕಿ ಮೂಲದ ಮೊದಲ ಜರ್ಮನಿ ಫುಟ್ಬಾಲ್ ಆಟಗಾರನಾಗಿದ್ದಾರೆ.
ಗುಂಡೋಗನ್ ಅವರ ಮಾಜಿ ಸಹ ಆಟಗಾರರಾದ ಟೋನಿ ಕ್ರೂಸ್ ಹಾಗೂ ಥಾಮಸ್ ಮುಲ್ಲರ್ ಕೂಡ ಇತ್ತೀಚೆಗೆ ಫುಟ್ಬಾಲ್ ಗೆ ವಿದಾಯ ಹೇಳಿದ್ದರು. ಕ್ರೂಸ್ ಅವರು ಯುರೋ 2024ರ ನಂತರ ಎಲ್ಲ ಮಾದರಿಯ ವೃತ್ತಿಪರ ಫುಟ್ಬಾಲ್ ನಿಂದ ನಿವೃತ್ತಿಯಾಗಿದ್ದರು. ಮುಲ್ಲರ್ ಕಳೆದ ತಿಂಗಳು ಅಂತರರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗಿದ್ದರು.







