ಸ್ಥಳೀಯ ಬೌಲರ್ಗೆ ಗಿಲ್ ಬೌಲ್ಡ್; 25 ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ

PC: x.com/CrickitbyHT
ದುಬೈ: ಒಂದು ವರ್ಷದ ಬಳಿಕ ಟಿ20 ಪಂದ್ಯ ಆಡಲು ಸಜ್ಜಾಗಿರುವ ಭಾರತ ಟಿ20 ತಂಡದ ಉಪನಾಯಕ ಶುಭಮನ್ ಗಿಲ್ ಮಂಗಳವಾರ ಅಪರೂಪಕ್ಕೆ ಎಂಬಂತೆ ಆಘಾತ ಅನುಭವಿಸಿದರು. ಐಸಿಸಿ ಅಕಾಡೆಮಿ ಆಯೋಜಿಸಿದ್ದ ಐಚ್ಛಿಕ ತರಬೇತಿಯಲ್ಲಿ ಭಾಗವಹಿಸಿದ್ದ ಗಿಲ್ ಆರಂಭಿಕ ಎಸೆತದಲ್ಲಿ ಎಕ್ಸ್ಟ್ರಾ ಕವರ್ ನಲ್ಲಿ ಬೌಂಡರಿ ಗಳಿಸಿದರೂ, ಮರು ಎಸೆತದಲ್ಲಿ ಸ್ಥಳೀಯ ಬೌಲರ್ ಆಫ್ ಸ್ಟಂಪ್ ಕಬಳಿಸುವ ಮೂಲಕ ಸ್ಟಾರ್ ಆಟಗಾರನಿಗೆ ಆಘಾತ ನೀಡಿದರು.
ಇನ್ನೊಂದೆಡೆ ಅವರ ಆರಂಭಿಕ ಜತೆಗಾರ ಅಭಿಷೇಕ್ ಶರ್ಮಾ ಏಷ್ಯಾ ಕಪ್ನ ಎಲ್ಲ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಒಂದು ಗಂಟೆ ಅವಧಿಯ ತರಬೇತಿಯಲ್ಲಿ ವೈವಿಧ್ಯಮಯ ಶ್ರೇಣಿಯ ಹೊಡೆತಗಳನ್ನು ಪ್ರದರ್ಶಿಸಿದ ಶರ್ಮಾ ಕನಿಷ್ಠ 25 ರಿಂದ 30 ಸಿಕ್ಸರ್ ಗಳನ್ನು ಸಿಡಿಸಿದರು ಎಂದು ಪಿಟಿಐ ವರದಿ ಮಾಡಿದೆ. ಶರ್ಮಾ ಅವರ ಅದ್ಭುತ ಪ್ರದರ್ಶನವನ್ನು ಪ್ರೇಕ್ಷಕರು ಕಣ್ಣೆವೆಯಿಕ್ಕದೇ ನೋಡಿದರು ಎಂದು ವರದಿ ಬಣ್ಣಿಸಿದೆ. ಶಕ್ತಿಶಾಲಿ ಹೊಡೆತಗಳಿಗೆ ಕೈಹಾಕದೇ ನಿರಾಯಾಸವಾಗಿ ಕೈ ಮತ್ತು ಕಣ್ಣಿನ ನಡುವಿನ ಸಮನ್ವಯದಿಂದ ಎಸೆತಗಳನ್ನು ಬೌಂಡರಿ ಗೆರೆಯಾಚೆಗೆ ಕಳುಹಿಸುವ ಅಪರೂಪದ ಕ್ಷಣಕ್ಕೆ ತರಬೇತಿ ಸಾಕ್ಷಿಯಾಯಿತು.
ಗಿಲ್ ಅವರ ಪುನರಾಗಮನದಿಂದ ಸಂಜು ಸ್ಯಾಮ್ಸನ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಏಷ್ಯಾ ಕಪ್ಗೆ ಮುನ್ನ ನಡೆದ ಕೇರಳ ಕ್ರಿಕೆಟ್ ಲೀಗ್ನಲ್ಲಿ 6ನೇ ಕ್ರಮಾಂಕದ ಆಟಗಾರನಾಗಿ ಕಣಕ್ಕೆ ಇಳಿದಿದ್ದ ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ದುಬೈನಲ್ಲಿ ನಡೆದ ಎರಡು ಅಭ್ಯಾಸ ಸೆಷನ್ ಗಳು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಆದ್ಯತೆಯ ಬಗ್ಗೆ ಸುಳಿವು ನೀಡಿವೆ.
ಸೋಮವಾರ ಮುಖ್ಯ ತರಬೇತಿ ಅವಧಿಯಲ್ಲಿ ಸ್ಯಾಮ್ಸನ್ ಬ್ಯಾಟಿಂಗ್ ಅವಕಾಶ ಪಡೆಯಲಿಲ್ಲ. ಇನ್ನೊಂದೆಡೆ ಜಿತೇಶ್ ಶರ್ಮಾ ಅಭ್ಯಾಸದ ವೇಳೆ ಪ್ರದರ್ಶಿಸಿದ ಆತ್ಮವಿಶ್ವಾಸ ಹಾಗೂ ನಿರಾಳವಾಗಿ ಬ್ಯಾಟ್ ಬೀಸುತ್ತಿದ್ದ ರೀತಿ, ಪಂದ್ಯದ ಮುಕ್ತಾಯದ ಹಂತದಲ್ಲಿ ಅವರ ಪ್ರಾಮುಖ್ಯತೆಯನ್ನು ತೋರಿಸಿದೆ ಹಾಗೂ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸುವ ಕಾರಣದಿಂದ ಅವರು ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ.
ಉಳಿದಂತೆ ಹಿರಿಯ ಆಟಗಾರರಾದ ಜಸ್ಪ್ರೀತ್ ಬೂಮ್ರಾ, ಕುಲದೀಪ್ ಯಾದವ್ ಮತ್ತು ವೇಗದ ಬೌಲರ್ ಹರ್ಷಿತ್ ರಾಣ ಆರ್ಸಿಬಿ ಸ್ಟಾರ್ ಆಟಗಾರನ ಜತೆ ಮೈದಾನದಲ್ಲಿ ಬೆವರು ಹರಿಸಿದರು. ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರ ಮಾರ್ಗದರ್ಶನದಲ್ಲಿ ಜಿತೇಶ್ ಕ್ಯಾಚಿಂಗ್ ಅಭ್ಯಾಸ ನಡೆಸಿದರು.







