ಏಶ್ಯ ಕಪ್ ಗಿಂತ ಮೊದಲು ಫಿಟ್ನೆಸ್ ಟೆಸ್ಟ್ ಪಾಸಾದ ಗಿಲ್, ಬುಮ್ರಾ, ರೋಹಿತ್

PC : PTI
ಹೊಸದಿಲ್ಲಿ, ಸೆ.1: ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕ ಶುಭಮನ್ ಗಿಲ್ ಹಾಗೂ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಸಹಿತ ಭಾರತದ ಹಲವು ಅಂತರರಾಷ್ಟ್ರೀಯ ಆಟಗಾರರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ (ಸಿಒಇ) ನಡೆದ ಫಿಟ್ನೆಸ್ ಟೆಸ್ಟ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿರುವ ಸಹ ಆಟಗಾರರಾದ ಜಸ್ಪ್ರಿತ್ ಬುಮ್ರಾ ಹಾಗೂ ಜಿತೇಶ್ ಶರ್ಮಾ ಅವರೊಂದಿಗೆ ಸೆ.9ರಿಂದ ಆರಂಭವಾಗಲಿರುವ 2025ರ ಆವೃತ್ತಿಯ ಏಶ್ಯ ಕಪ್ನಲ್ಲಿ ಭಾಗವಹಿಸಲು ಗಿಲ್ ಅವರು ಶೀಘ್ರವೇ ದುಬೈಗೆ ಪ್ರಯಾಣಿಸಲಿದ್ದಾರೆ.
25ರ ಹರೆಯದ ಗಿಲ್ ಅವರು ಏಶ್ಯಕಪ್ ಟಿ-20 ಟೂರ್ನಮೆಂಟ್ ಗೆ ಭಾರತದ ಉಪ ನಾಯಕನಾಗಿ ನೇಮಕಗೊಂಡಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯದ ನಾಯಕನಾಗಿ ನೇಮಕಗೊಂಡಿದ್ದ ಗಿಲ್ ಜ್ವರದಿಂದಾಗಿ ದುಲೀಪ್ ಟ್ರೋಫಿಯಿಂದ ಹೊರಗುಳಿದಿದ್ದರು. ಕಳೆದ ಕೆಲವು ದಿನಗಳಿಂದ ತವರು ಪಟ್ಟಣದಲ್ಲಿ ವಿಶ್ರಾಂತಿ ಪಡೆದಿದ್ದ ಗಿಲ್ಗೆ ಫಿಟ್ನೆಸ್ ಟೆಸ್ಟ್ ಗೆ ಒಳಗಾಗುವುದು ಕಡ್ಡಾಯವಾಗಿತ್ತು.
ಇತರ ಆಟಗಾರರಾದ ಮುಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ವಾಶಿಂಗ್ಟನ್ ಸುಂದರ್ ಹಾಗೂ ಶಾರ್ದುಲ್ ಠಾಕೂರ್ ಕೂಡ ಸಿಒಇನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾದರು.
ದೈಹಿಕ ಕ್ಷಮತೆಯ ಪರೀಕ್ಷೆಯ ವೇಳೆ ಯೋ-ಯೋ ಟೆಸ್ಟ್ ಅಲ್ಲದೆ, ಮೂಳೆ ಸಾಂದ್ರತೆಯನ್ನು ಪರೀಕ್ಷಿಸಲು ಸರಳೀಕೃತ ವಿಧಾನವಾದ ಡಿಎಕ್ಸ್ಎ ಸ್ಕ್ಯಾನಿಂಗ್ ಅನ್ನು ಕೂಡ ಮಾಡಲಾಯಿತು.
ಜೈಸ್ವಾಲ್ ಹಾಗೂ ಸುಂದರ್ ಅವರು ಏಶ್ಯಕಪ್ ಟೂರ್ನಿಯಲ್ಲಿ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ಸೆಪ್ಟಂಬರ್ 4ರಿಂದ ಕೇಂದ್ರ ವಲಯದ ವಿರುದ್ಧ ಆರಂಭವಾಗಲಿರುವ ದುಲೀಪ್ ಟ್ರೋಫಿ ಸೆಮಿ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯದ ನಾಯಕತ್ವವಹಿಸಲಿರುವ ಶಾರ್ದುಲ್ ಠಾಕೂರ್ ಅವರು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ.
ರೋಹಿತ್ ಶರ್ಮಾ ಟೆಸ್ಟ್ ಹಾಗೂ ಟಿ-20 ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ ಯಾವುದೇ ಸರಣಿಯನ್ನು ಆಡಿಲ್ಲ.
ಕಾನ್ಪುರದಲ್ಲಿ ಸೆ.30, ಅ.3 ಹಾಗೂ 5ರಂದು ಭಾರತ ‘ಎ’ ಹಾಗೂ ಆಸ್ಟ್ರೇಲಿಯ ‘ಎ’ ನಡುವಿನ 3 ಪಂದ್ಯಗಳ ಏಕದಿನ ಸರಣಿ, ಆ ನಂತರ ನವೆಂಬರ್ ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ರೋಹಿತ್ ಭಾಗವಹಿಸುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ಇನ್ನಷ್ಟು ದಿನ ಬೆಂಗಳೂರು ನಗರದಲ್ಲಿ ಉಳಿದುಕೊಳ್ಳಲಿದ್ದು, ಬಿಸಿಸಿಐನ ಸಿಒಇನಲ್ಲಿ ತರಬೇತಿ ನಡೆಸಲಿದ್ದಾರೆ.
ಏಶ್ಯ ಕಪ್ ತಂಡದಲ್ಲಿದ್ದ ಇತರ ಆಟಗಾರರಾದ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಕುಲದೀಪ್ ಯಾದವ್ ಹಾಗೂ ರಿಯಾನ್ ಪರಾಗ್ ಅವರು ತಮಗೆ ಸಂಬಂಧಪಟ್ಟ ವಲಯಗಳ ತಂಡದ ಪರ ದುಲೀಪ್ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯ ಆಡಿದ್ದಾರೆ. ಈ ನಾಲ್ವರಿಗೆ ಪ್ರತ್ಯೇಕ ಫಿಟ್ನೆಸ್ ಪರೀಕ್ಷೆ ಇರುವುದಿಲ್ಲ.







