ಗೆಲುವಿನ ಹಳಿಗೆ ಮರಳಿದ ಗುಕೇಶ್, ಡ್ರಾ ಸಾಧಿಸಿದ ಪ್ರಜ್ಞಾನಂದ, ಎರಿಗೈಸಿ

PC: x.com/chesscom_in
ಹೊಸದಿಲ್ಲಿ: ಸುಧೀರ್ಘ 72 ನಡೆಗಳ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಅವರು ವಿಜ್ಕ್ ಆನ್ ಝೀನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿ-2025ರಲ್ಲಿ ಬುಧವಾರ ಗೆಲುವಿನ ಹಳಿಗೆ ಮರಳಿದರು.
ವಿಶ್ವ ಚಾಂಪಿಯನ್ ಶಿಪ್ ಸಿದ್ಧತೆಯಲ್ಲಿ ರಚಿಸಲಾಗಿರುವ ತಂಡದ ಸದಸ್ಯರಾದ ವಿನ್ಸೆಂಟ್ ಕೇಮರ್ ಜತೆಗಿನ ಸುಧೀರ್ಘ ಹೋರಾಟದಲ್ಲಿ ಗುಕೇಶ್ ಪ್ರಬುದ್ಧ ಆಟ ಪ್ರದರ್ಶಿಸಿ ಡಚ್ ನೆಲದಲ್ಲಿ ನಡೆಯುವ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಮಿಂಚುವ ಭರವಸೆ ಮೂಡಿಸಿದರು.
ಬಿಳಿ ಕಾಯಿಗಳೊಂದಿಗೆ ಆಡಿದ ಚೆನ್ನೈ ಸಂಜಾತ ಗ್ರ್ಯಾಂಡ್ಮಾಸ್ಟರ್ ಕೆಲವೊಂದು ತಪ್ಪು ನಡೆಗಳನ್ನು ಇಟ್ಟ ಕಾರಣದಿಂದ ಜರ್ಮನ್ ಆಟಗಾರ ಚೇತರಿಸಿಕೊಂಡರು. ಆದರೆ ಕೇಮರ್ ಅವರ ಪಟ್ಟು ಬಿಡದ ಹೋರಾಟದಲ್ಲಿ ಕೊನೆಗೂ ಗುಕೇಶ್ ಅವರು ಉತ್ಕೃಷ್ಟ ಕೌಶಲಗಳನ್ನು ಪ್ರದರ್ಶಿಸುವ ಮೂಲಕ ಗೆಲುವಿನ ನಗೆ ಬೀರಿದರು.
ರಮೇಶ್ ಬಾಬು ಪ್ರಜ್ಞಾನಂದ ಅವರು ಮ್ಯಾಕ್ಸ್ ವರ್ಮೆರ್ಡಮ್ ವಿರುದ್ಧ ಡ್ರಾ ಸಾಧಿಸುವ ಮೂಲಕ ಮುನ್ನಡೆ ಉಳಿಸಿಕೊಂಡರು. ಫ್ರೆಂಚ್ ಡಿಫೆನ್ಸ್ ಶೈಲಿಗೆ ಮೊರೆ ಹೋದ ಆಟಗಾರರು ಆರಂಭದಿಂದಲೂ ಸಮಬಲ ಹೊಂದಿದ್ದರು. ಕಪ್ಪು ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ, ಆಕ್ರಮಣಕಾರಿ ಆಟದ ಮೂಲಕ ಎದುರಾಳಿಯ ರಕ್ಷಣಾತ್ಮಕ ಕೌಶಲಗಳನ್ನು ಒರೆಗೆ ಹಚ್ಚಿದರು. 39 ನಡೆಗಳ ಬಳಿಕ ಉಭಯ ಆಟಗಾರರು ಡ್ರಾಗೆ ಒಪ್ಪಿಕೊಂಡರು. ಇದು ಪ್ರಜ್ಞಾನಂದ ಅವರಿಗೆ ಟೂರ್ನಿಯಲ್ಲಿ ಎರಡನೇ ಜಯವಾಗಿದೆ.
ಆಟದ ಲಯ ಕಂಡುಕೊಳ್ಳಲು ಹೆಣಗುತ್ತಿದ್ದ ಅರ್ಜುನ್ ಎರಿಗೈಸಿ ಬುಧವಾರದ ಪಂದ್ಯದಲ್ಲಿ ಲಿಯಾನ್ ಲೂಕ್ ಮೆಂಡೋನ್ಸಾ ವಿರುದ್ಧ ಗೆಲುವು ಸಾಧಿಸಿದರು. ಐದು ಸುತ್ತಿನ ಬಳಿಕ ಪ್ರಜ್ಞಾನಂದ ಮತ್ತು ಅಬ್ದುಸತ್ತರೋವ್ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಗುಕೇಶ್, ಫೆಡೊಸೀವ್ 3.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಹರಿಕೃಷ್ಣ ಐದು ಪಂದ್ಯಗಳಿಂದ ಮೂರು ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.







