ಸೌಂಡ್ ರನ್ನಿಂಗ್ ಟ್ರ್ಯಾಕ್ ಫೆಸ್ಟ್ | 5,000 ಮೀಟರ್ ಓಟ: ರಾಷ್ಟ್ರೀಯ ದಾಖಲೆ ಮುರಿದು ಬೆಳ್ಳಿ ಗೆದ್ದ ಗುಲ್ವೀರ್ ಸಿಂಗ್

Photo : x
ಹೊಸದಿಲ್ಲಿ,ಮೇ 24: ಪುರುಷರ 5,000 ಮೀ. ಹಾಗೂ 10,000 ಮೀ.ಓಟದಲ್ಲಿ ಏಶ್ಯನ್ ಚಾಂಪಿಯನ್ ಆಗಿರುವ ಗುಲ್ವೀರ್ ಸಿಂಗ್ ಅವರು ಲಾಸ್ ಏಂಜಲೀಸ್ನಲ್ಲಿ ರವಿವಾರ ನಡೆದ ಸೌಂಡ್ ರನ್ನಿಂಗ್ ಟ್ರ್ಯಾಕ್ ಫೆಸ್ಟ್ನಲ್ಲಿ ಪುರುಷರ 5,000 ಮೀ. ಓಟದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಎರಡನೇ ಸ್ಥಾನ ಪಡೆಯುವ ಹಾದಿಯಲ್ಲಿ ಗುಲ್ವೀರ್ ಸಿಂಗ್ ಅವರು ಎರಡು ವರ್ಷಗಳ ಹಿಂದೆ ಜಪಾನ್ನಲ್ಲಿ ನಿರ್ಮಿಸಿದ್ದ ತನ್ನದೇ ರಾಷ್ಟ್ರೀಯ ದಾಖಲೆಯೊಂದನ್ನು ಮುರಿದರು.
ಕಳೆದ ವರ್ಷ ಗುಲ್ವೀರ್ ಅವರು ಪುರುಷರ 5,000 ಮೀ.ಓಟದಲ್ಲಿ 13 ನಿಮಿಷಗಳ ಗಡಿಯನ್ನು ಮೀರಿದ ಭಾರತದ ಮೊದಲ ಓಟಗಾರ ಎನಿಸಿಕೊಂಡಿದ್ದರು. ಬೋಸ್ಟನ್ನಲ್ಲಿ ನಡೆದ ಡಿಎಂಆರ್ ಚಾಲೆಂಜ್ನಲ್ಲಿ ಇಂಡೋರ್ ರೇಸ್ನಲ್ಲಿ 12:29.77 ಸೆಕೆಂಡ್ನಲ್ಲಿ ಗುರಿ ತಲುಪಿದ ಗುಲ್ವೀರ್ ಈ ಸಾಧನೆ ಮಾಡಿದ್ದರು. ಇದು ಗುಲ್ವೀರ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿ ಉಳಿದುಕೊಂಡಿದೆ.
ಸದ್ಯ ಅಮೆರಿಕದಲ್ಲಿರುವ ಗುಲ್ವೀರ್ ಅವರು ಟ್ರ್ಯಾಕ್ನಲ್ಲಿ 3,000 ಮೀ. ಓಟದಿಂದ 25 ಮೀ. ರೋಡ್ ರೇಸ್ ತನಕ ಎಲ್ಲ ಸ್ಪರ್ಧೆಗಳಲ್ಲಿ ಹಲವು ರಾಷ್ಟ್ರೀಯ ದಾಖಲೆಗಳನ್ನು ಹೊಂದಿರುವ ಭಾರತದ ಮೊದಲ ದೂರ ಅಂತರದ ಓಟಗಾರನಾಗಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ಬೆಳ್ಳಿ ಗೆದ್ದಿರುವ ಗುಲ್ವೀರ್ ಈ ಋತುವಿನಲ್ಲಿ ತನ್ನ ನಾಲ್ಕನೇ ಸ್ಪರ್ಧಾವಳಿಯನ್ನು ಗೆದ್ದಿದ್ದಾರೆ.
ಫೆಬ್ರವರಿಯಲ್ಲಿ ಅಮೆರಿಕದಲ್ಲಿ ನಡೆದಿದ್ದ ಸೌಂಡ್ ರನ್ನಿಂಗ್ ಇನ್ವೈಟ್ ಟೂರ್ನಿಯ 5,000 ಮೀ. ಶಾರ್ಟ್ ಟ್ರ್ಯಾಕ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.






