ವಿನೇಶ್ ಫೋಗಟ್ ಗೆ ಚಿನ್ನದ ಪದಕ ನೀಡಲು ಹರ್ಯಾಣ ಖಾಪ್ ಪಂಚಾಯತ್ ನಿರ್ಧಾರ

Photo credit: PTI
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿದ್ದರೂ ಪದಕ ಗೆಲ್ಲಲಾಗದ ನೋವಿನಲ್ಲಿ ಸ್ವದೇಶಕ್ಕೆ ವಾಪಸಾಗಿರುವ ಕುಸ್ತಿ ತಾರೆ ವಿನೇಶ್ ಫೋಗಟ್ ಗೆ ಮತ್ತೆ ಬೆಂಬಲವನ್ನು ಪ್ರದರ್ಶಿಸಿರುವ ಖಾಪ್ ಪಂಚಾಯತ್ಗಳು ಚಿನ್ನದ ಪದಕ ಪ್ರದಾನಿಸಲು ನಿರ್ಧರಿಸಿವೆ.
ಒಲಿಂಪಿಕ್ ಗೇಮ್ಸ್ನಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯ ಫೈನಲ್ ಪಂದ್ಯಕ್ಕಿಂತ ಮೊದಲು ನಡೆದ ತೂಕದ ತಪಾಸಣೆಯಲ್ಲಿ 100 ಗ್ರಾಂ. ಹೆಚ್ಚು ತೂಕ ಹೊಂದಿದ್ದ ಕಾರಣಕ್ಕೆ ವಿನೇಶ್ರನ್ನು ಒಲಿಂಪಿಕ್ಸ್ ನಿಂದಲೇ ಅನರ್ಹಗೊಳಿಸಲಾಗಿತ್ತು. ತನಗೆ ಜಂಟಿಯಾಗಿ ಬೆಳ್ಳಿ ಪದಕವನ್ನು ನೀಡಬೇಕೆಂದು ಕ್ರೀಡಾ ನ್ಯಾಯ ಮಂಡಳಿಗೆ(ಸಿಎಎಸ್) ವಿನೇಶ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ವಿನೇಶ್ ಅವರ ಮನವಿಯನ್ನು ವಜಾಗೊಳಿಸಿತ್ತು.
ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತರಿಗೆ ನೀಡುವ ಪದಕವನ್ನು ಹೋಲುವ ಚಿನ್ನದ ಪದಕವನ್ನು ನಾವು ಸಿದ್ದಪಡಿಸುತ್ತೇವೆ. ಇದು 50 ಗ್ರಾಂ ಅಥವಾ 100 ಗ್ರಾಂ ತೂಗಬಹುದು ಎಂದು ಸಾಂಗ್ವಾನ್ ಖಾಪ್ ಅಧ್ಯಕ್ಷ ಹಾಗೂ ಪಕ್ಷೇತರ ಶಾಸಕ ಸೋಂಬಿರ್ ಸಾಂಗ್ವಾನ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಹಾಲಿ ಶಾಸಕ ಸೋಂಬಿರ್ ಸಾಂಗ್ವಾನ್ ಹಾಗೂ ಇತರ ಖಾಪ್ ನಾಯಕರುಗಳು ರವಿವಾರ ವಿನೇಶ್ ಅವರ ಗ್ರಾಮ ಬಲಾಲಿಗೆ ಭೇಟಿ ನೀಡಿ ಆಗಸ್ಟ್ 25ರಂದು ರೋಹ್ಟಕ್ನಲ್ಲಿ ನಡೆಯಲಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನೇಶ್ ಗೆ ಆಹ್ವಾನ ನೀಡಿದ್ದಾರೆ.
100 ಗ್ರಾಂ ಅಧಿಕ ತೂಕದ ನೆಪದಲ್ಲಿ ಕುಸ್ತಿಪಟುವನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿದ ರೀತಿಯು ಅಸಹನೀಯವಾಗಿದೆ. ವಿನೇಶ್ ವಿರುದ್ದ ಪಿತೂರಿ ನಡೆಸಲಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರು ಒಲಿಂಪಿಕ್ಸ್ ನಲ್ಲಿ ಮೂರು ಪಂದ್ಯಗಳನ್ನು ಗೆದ್ದ ನಂತರ ಕೋಟ್ಯಂತರ ಜನರ ಹೃದಯವನ್ನು ಗೆದ್ದಿದ್ದಾರೆ. ಅದಕ್ಕಾಗಿಯೇ ಪ್ರತಿಯೊಬ್ಬ ಭಾರತೀಯನು ಚಿನ್ನದ ಪದಕ ವಿಜೇತರಿಗಿಂತ ಹೆಚ್ಚಿನ ಗೌರವವನ್ನು ವಿನೇಶ್ ಗೆ ನೀಡುತ್ತಿದ್ದಾರೆ ಎಂದು ಸಾಂಗ್ವಾನ್ ಹೇಳಿದ್ದಾರೆ.
ಹರ್ಯಾಣ ಹಾಗೂ ಉತ್ತರದ ಇತರ ಪಕ್ಕದ ರಾಜ್ಯಗಳ ಖಾಪ್ ನಾಯಕರುಗಳು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.







