ನಾನು ಯಾರಿಂದಲೂ 1.50 ಕೋಟಿ ರೂ. ಸ್ವೀಕರಿಸಿಲ್ಲ : ಬ್ಯಾಡ್ಮಿಂಟನ್ ಸ್ಟಾರ್ ಅಶ್ವಿನಿ ಪೊನ್ನಪ್ಪ
ಒಲಿಂಪಿಕ್ಸ್ ಫಂಡಿಂಗ್ ವರದಿ ಸುಳ್ಳು ಎಂದ ಕನ್ನಡತಿ

ಅಶ್ವಿನಿ ಪೊನ್ನಪ್ಪ | PC : PTI
ಹೊಸದಿಲ್ಲಿ : ಕ್ರೀಡಾ ಪ್ರಾಧಿಕಾರಗಳು ಹಾಗೂ ಸರಕಾರದ ಬೆಂಬಲವನ್ನು ಸ್ವೀಕರಿಸಿದ ಹೊರತಾಗಿಯೂ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ಗಳ ಕಳಪೆ ಪ್ರದರ್ಶನವು ಟೀಕೆಗೆ ಗುರಿಯಾಗಿದೆ. ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಹಾಗೂ ಲಕ್ಷ್ಯ ಸೇನ್ ಕೋಚ್ ಪ್ರಕಾಶ್ ಪಡುಕೋಣೆ ಅವರು ಪದಕ ಗೆಲ್ಲಲು ವಿಫಲವಾಗಿದ್ದಕ್ಕೆ ಹಿರಿಯ ಆಟಗಾರರು ಹೊಣೆ ಹೊರಬೇಕೆಂದು ಆಗ್ರಹಿಸಿದ್ದರು. ಪ್ಯಾರಿಸ್ ಗೇಮ್ಸ್ನಲ್ಲಿ ಭಾರತದ ಬ್ಯಾಡ್ಮಿಂಟನ್ ತಂಡದ ಕಳಪೆ ಪ್ರದರ್ಶನವನ್ನು ಬಿಂಬಿಸುತ್ತಾ, ಟಾಪ್ಸ್ ಯೋಜನೆಯಿಂದ ಬ್ಯಾಡ್ಮಿಂಟನ್ ಸ್ಟಾರ್ಗಳು ಪಡೆದ ಹಣದ ಕುರಿತು ಪಿಟಿಐ ವರದಿ ಮಾಡಿತ್ತು. ಆದರೆ ಶಟ್ಲರ್ ಅಶ್ವಿನಿ ಪೊನ್ನಪ್ಪ ಈ ವರದಿಯನ್ನು ಸುಳ್ಳು ಎಂದಿದ್ದಾರೆ.
ತರಬೇತಿಗಾಗಿ ಎಚ್.ಎಸ್.ಪ್ರಣಯ್ 1.8 ಕೋಟಿ ರೂ. ಸ್ವೀಕರಿಸಿದರೆ, ಮಹಿಳೆಯರ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ 1.5 ಕೋಟಿ ರೂ. ಸ್ವೀಕರಿಸಿದ್ದರು ಎಂದು ಪಿಟಿಐ ವರದಿ ಮಾಡಿತ್ತು.
ಈ ವರದಿಗೆ ಪ್ರತಿಕ್ರಿಯಿಸಿದ ಅಶ್ವಿನಿ, ನಾನು ಯಾವುದೇ ಹಣವನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.
ವಾಸ್ತವಾಂಶಗಳನ್ನು ಸರಿಯಾಗಿ ಸಂಗ್ರಹಿಸದೆ ಈ ವರದಿಯನ್ನು ಸಿದ್ಧಪಡಿಸಿದ್ದು ಹೇಗೆ? ಈ ಸುಳ್ಳನ್ನು ಬರೆದಿದ್ದು ಹೇಗೆ? 1.5 ಕೋಟಿ ರೂ.ವನ್ನು ಯಾರಿಂದ, ಯಾವುದಕ್ಕಾಗಿ ಸ್ವೀಕರಿಸಲಾಗಿದೆ? ನಾನು ಈ ಹಣವನ್ನು ಸ್ವೀಕರಿಸಿಲ್ಲ. ನಾನು ಯಾವುದೇ ಸಂಸ್ಥೆ, ಟಾಪ್ಸ್ ಯೋಜನೆಯ ಭಾಗವಾಗಿರಲಿಲ್ಲ ಎಂದು ಕನ್ನಡತಿ ಅಶ್ವಿನಿ ಪೊನ್ನಪ್ಪ ಎಕ್ಸ್ನಲ್ಲಿ ಬರೆದಿದ್ದಾರೆ.
ಕೇಂದ್ರ ಸರಕಾರವು ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಗೆ 5.62 ಕೋಟಿ ರೂ. ವ್ಯಯಿಸಿತ್ತು. ಆದರೆ ಈ ಇಬ್ಬರು ಕ್ವಾರ್ಟರ್ ಫೈನಲ್ನಲ್ಲಿ ಸೋತಿದ್ದರು. ಸರಕಾರವು ಪಿ.ವಿ. ಸಿಂಧು ಹಾಗೂ ಲಕ್ಷ್ಯ ಸೇನ್ಗೆ ಜರ್ಮನಿ ಹಾಗೂ ಫ್ರಾನ್ಸ್ನಲ್ಲಿ ತರಬೇತಿ ನಡೆಸಲು ಕ್ರಮವಾಗಿ 26.60 ಲಕ್ಷ ರೂ. ಹಾಗೂ 9.33 ಲಕ್ಷ ರೂ.ಖರ್ಚು ಮಾಡಿದೆ ಎಂದು ವರದಿ ಮಾಡಿತ್ತು.
ಒಟ್ಟಾರೆಯಾಗಿ ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯ್)ಮಿಶನ್ ಒಲಿಂಪಿಕ್ಸ್ ಸೆಲ್ ಬ್ಯಾಡ್ಮಿಂಟನ್ ತಂಡಕ್ಕೆ 72.03 ಕೋಟಿ ರೂ. ಮೀಸಲಿಟ್ಟಿತ್ತು. ಭಾರತದ ಒಲಿಂಪಿಕ್ಸ್ ಸಿದ್ಧತೆಗಳಿಗಾಗಿ 16 ಕ್ರೀಡೆಗಳಿಗೆ ಸುಮಾರು 470 ಕೋಟಿ ರೂ.ವ್ಯಯಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.







