ಡೇವಿಸ್ ಕಪ್ ತರಬೇತುದಾರ ಹುದ್ದೆಗೆ ಝೀಶನ್ ಅಲಿ ರಾಜೀನಾಮೆ

ಝೀಶನ್ ಅಲಿ | PC : PTI
ಹೊಸದಿಲ್ಲಿ: ಸ್ಟಾಕ್ ಹಾಮ್ ನಲ್ಲಿ ಸ್ವೀಡನ್ ಎದುರಿಗೆ ಡೇವಿಸ್ ಕಪ್ ಪಂದ್ಯಾವಳಿ ನಡೆಯಲು ಇನ್ನೂ ಒಂದು ತಿಂಗಳು ಬಾಕಿ ಇರುವಾಗ, ಭಾರತೀಯ ಡೇವಿಸ್ ಕಪ್ ತಂಡದ ತರಬೇತುದಾರ ಹುದ್ದೆಗೆ ಬುಧವಾರ ಝೀಶನ್ ಅಲಿ ರಾಜೀನಾಮೆ ಪ್ರಕಟಿಸಿದ್ದಾರೆ.
“ನಾನು ಡೇವಿಸ್ ಕಪ್ ತಂಡದ ತರಬೇತುದಾರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ” ಎಂದು PTI ಸುದ್ದಿ ಸಂಸ್ಥೆಗೆ ಝೀಶನ್ ಅಲಿ ತಿಳಿಸಿದ್ದಾರೆ.
2013ರಲ್ಲಿ ಹೊಸ ದಿಲ್ಲಿಯಲ್ಲಿ ದಕ್ಷಿಣ ಕೊರಿಯಾ ತಂಡದೆದುರು ಡೇವಿಸ್ ಕಪ್ ನಡೆಯುವುದಕ್ಕೂ ಮುನ್ನ, ನಂದನ್ ಬಾಲ್ ಬದಲು 54 ವರ್ಷದ ಝೀಶನ್ ಅಲಿ ಭಾರತೀಯ ಡೇವಿಸ್ ಕಪ್ ತಂಡದ ತರಬೇತುದಾರರಾಗಿ ನೇಮಕವಾಗಿದ್ದರು.
“ನಾನು ಕಳೆದ 11 ವರ್ಷಗಳಿಂದ ಡೇವಿಸ್ ಕಪ್ ತಂಡದ ತರಬೇತುದಾರನಾಗಿದ್ದೇನೆ. ಇದಕ್ಕೆಲ್ಲ ಕಿರೀಟವಿಟ್ಟಂತೆ, ಈ ವರ್ಷ ಪಾಕಿಸ್ತಾನದಲ್ಲಿ ಪಾಕಿಸ್ತಾನದೆದುರು ನಡೆದ ಐತಿಹಾಸಿಕ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ತಂಡದ ನಾಯಕನೂ ಆಗಿದ್ದೆ. ಯಾವುದೇ ದೇಶದ ವ್ಯಕ್ತಿಗೆ ಇಂತಹ ಅವಕಾಶ ಮತ್ತು ಗೌರವ ದೊರೆತಿದೆ ಎಂದು ನಾನು ಭಾವಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಡೇವಿಸ್ ಕಪ್ ತಂಡಕ್ಕೆ ಏಕಕಾಲದಲ್ಲಿ ತರಬೇತುದಾರ ಹಾಗೂ ನಾಯಕ ಎರಡೂ ಆಗಿದ್ದ ಹಿರಿಮೆಗೆ ಝೀಶನ್ ಅಲಿ ಭಾಜನರಾಗಿದ್ದಾರೆ.
ಸೆಪ್ಟೆಂಬರ್ 14-15ರಂದು ಸ್ವೀಡನ್ ನ ಸ್ಟಾಕ್ ಹಾಮ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಸ್ವೀಡನ್ ತಂಡಗಳು ಮುಖಾಮುಖಿಯಾಗಲಿವೆ.







