ನಾನು ಬಿಸಿಸಿಐ ಗುತ್ತಿಗೆಯನ್ನು ನಿರ್ಧರಿಸುವುದಿಲ್ಲ: ಇಶಾನ್ ಕಿಶಾನ್, ಶ್ರೇಯಸ್ ಅಯ್ಯರ್ ಕೈಬಿಟ್ಟ ಬಗ್ಗೆ ಮೌನ ಮುರಿದ ರಾಹುಲ್ ದ್ರಾವಿಡ್

ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ | Photo: PTI
ಹೊಸದಿಲ್ಲಿ: “ಅವರು ಯಾವಾಗಲೂ ಗೊಂದಲದಲ್ಲಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ದೇಶೀಯ ಕ್ರಿಕೆಟ್ ಆಡುತ್ತಿರುವ ಎಲ್ಲರೂ ಗೊಂದಲದಲ್ಲಿರುತ್ತಾರೆ. ನಾನು ಗುತ್ತಿಗೆಗಳನ್ನು ನಿರ್ಧರಿಸುವುದಿಲ್ಲ. ಅದನ್ನು ಮಂಡಳಿ ಹಾಗೂ ಆಯ್ಕೆದಾರರು ನಿರ್ಧರಿಸುತ್ತಾರೆ. ಅದಕ್ಕಿರುವ ಮಾನದಂಡವೇನು ಎಂಬುದೂ ನನಗೆ ತಿಳಿದಿಲ್ಲ.
ಜನರು ಆಡುವ 15 ಮಂದಿ ಸದಸ್ಯರ ತಂಡದ ಬಗ್ಗೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ನಾನು ಹಾಗೂ ರೋಹಿತ್ ಆಡುವ 11 ಮಂದಿಯ ತಂಡವನ್ನು ಆಯ್ಕೆ ಮಾಡುತ್ತೇವೆ. ನಾವು ಆತನಿಗೆ ಗುತ್ತಿಗೆ ಇದೆಯೊ ಇಲ್ಲವೊ, ಆತನನ್ನು ಆಯ್ಕೆ ಮಾಡಬೇಕೊ ಬೇಡವೊ ಎಂಬ ಕುರಿತು ಚರ್ಚಿಸುವುದೇ ಇಲ್ಲ. ಗುತ್ತಿಗೆ ಇದ್ದರೂ ಇಲ್ಲದಿದ್ದರೂ ಹಲವಾರು ಆಟಗಾರರು ಆಟದ ವಿವಿಧ ಮಾದರಿಗಳಲ್ಲಿ ಆಡುತ್ತಿರುವ ಅಸಂಖ್ಯಾತ ಉದಾಹರಣೆಗಳಿವೆ” ಎಂದು ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಕೈ ಬಿಟ್ಟಿರುವ ಕುರಿತು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಮೊತ್ತ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಎರಡು ಪಂದ್ಯಗಳ ನಂತರ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ದಕ್ಷಿಣ ಆಫ್ರಿಕಾದ ಪ್ರವಾಸದ ಮಧ್ಯೆಯೆ ತವರಿಗೆ ಮರಳಿದ್ದ ಇಶಾನ್ ಕಿಶನ್ ಅಲ್ಲಿಂದ ವಿಶ್ರಾಂತಿಯಲ್ಲಿದ್ದಾರೆ. ಇವರಿಬ್ಬರನ್ನೂ ಇತ್ತೀಚೆಗೆ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿತ್ತು. ಅವರು ದೇಶೀಯ ಕ್ರಿಕೆಟ್ ನಲ್ಲಿ ಆಡಲು ಹಿಂಜರಿಕೆ ತೋರಿದ್ದರಿಂದ ಅವರನ್ನು ತಂಡದಿಂದ ಕೈಬಿಟ್ಟಿರಬಹುದು ಎಂದು ಊಹಿಸಲಾಗಿದೆ.
ತನಗೆ ಬೆನ್ನು ಹುರಿ ಸಮಸ್ಯೆ ಇದೆ ಎಂದು ಹೇಳಿ ರಣಜಿ ಕ್ರೀಡಾಕೂಟದಲ್ಲಿ ಮುಂಬೈ ಪರವಾಗಿ ಆಡುವ ಅವಕಾಶವನ್ನು ಶ್ರೇಯಸ್ ಅಯ್ಯರ್ ತಪ್ಪಿಸಿಕೊಂಡಿದ್ದರು. ಆದರೆ, ಅವರ ನೆಪಕ್ಕೆ ವಿರುದ್ಧವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯು ವರದಿ ನೀಡಿದ್ದು, ಅವರು ದೈಹಿಕವಾಗಿ ಸಮರ್ಥವಾಗಿದ್ದಾರೆ ಎಂದು ಹೇಳಿದೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಈ ಸಂದರ್ಭದಲ್ಲಿ ಐಪಿಎಲ್ ಪೂರ್ವ ಶಿಬಿರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಶ್ರೇಯಸ್ ಅಯ್ಯರ್ ಪಾಲ್ಗೊಂಡಿದ್ದರು ಎಂದು ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ್ದವು.
ಇಶಾನ್ ಕಿಶನ್ ಕೂಡಾ ತಮ್ಮ ತವರು ತಂಡವಾದ ಜಾರ್ಖಂಡ್ ಪರವಾಗಿ ರಣಜಿ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸದ ನಡುವೆಯೇ ಭಾರತಕ್ಕೆ ಮರಳಿ ಬಂದಿದ್ದ ಇಶಾನ್ ಕಿಶನ್, ಅಂದಿನಿಂದ ವಿಶ್ರಾಂತಿಯಲ್ಲಿದ್ದರು. ನಂತರ, ಅವರು ರಣಜಿ ಪಂದ್ಯದಲ್ಲಿ ಆಡುವ ಬದಲು ತಮ್ಮ ಐಪಿಎಲ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರೊಂದಿಗೆ ತರಬೇತಿ ನಿರತರಾಗಿರುವುದು ಕಂಡು ಬಂದಿತ್ತು.







