ಐಸಿಸಿ ಪುರುಷರ ಅಂತರ್ರಾಷ್ಟ್ರೀಯ ಟಿ20 ಆಟಗಾರರ ರ್ಯಾಂಕಿಂಗ್ ಪ್ರಕಟ
ಅಕ್ಷರ್ ಪಟೇಲ್ ಗೆ ಜೀವನಶ್ರೇಷ್ಠ 5ನೇ ರ್ಯಾಂಕಿಂಗ್ ; ಜೈಸ್ವಾಲ್ ಗೆ ಬ್ಯಾಟಿಂಗ್ ವಿಭಾಗದಲ್ಲಿ ಜೀವನಶ್ರೇಷ್ಠ 6ನೇ ಸ್ಥಾನ
Photo:icc-cricket.com
ದುಬೈ: ಐಸಿಸಿ ಪುರುಷರ ಅಂತರ್ರಾಷ್ಟ್ರೀಯ ಟಿ20 ಆಟಗಾರರ ರ್ಯಾಂಕಿಂಗ್ನ ಬೌಲರ್ ಗಳ ವಿಭಾಗದಲ್ಲಿ ಭಾರತದ ಅಕ್ಷರ್ ಪಟೇಲ್ 12 ಸ್ಥಾನಗಳನ್ನು ಜಿಗಿದು ಜೀವನಶ್ರೇಷ್ಠ ಐದನೇ ಸ್ಥಾನವನ್ನು ಗಳಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ನೀಡಿರುವ ಗಮನಾರ್ಹ ನಿರ್ವಹಣೆಯ ಬಳಿಕ ಅವರ ರ್ಯಾಂಕಿಂಗ್ನಲ್ಲಿ ಈ ಸುಧಾರಣೆ ಕಂಡುಬಂದಿದೆ.
ಅವರು ಅಫ್ಘಾನಿಸ್ತಾನ ವಿರುದ್ಧದ ಮೊದಲ ಟ್ವೆಂಟಿ20 ಪಂದ್ಯದಲ್ಲಿ 23 ರನ್ಗಳನ್ನು ಕೊಟ್ಟು ಎರಡು ವಿಕೆಟ್ ಮತ್ತು ಎರಡನೇ ಪಂದ್ಯದಲ್ಲಿ 16 ರನ್ಗಳನ್ನು ಕೊಟ್ಟು ಎರಡು ವಿಕೆಟ್ಗಳನ್ನು ಪಡೆದಿದ್ದಾರೆ.
ಅವರು ಆಲ್ರೌಂಡರ್ ಗಳ ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ 34 ಎಸೆತಗಳಲ್ಲಿ ಗಳಿಸಿದ 68 ರನ್ಗಳು ಯಶಸ್ವಿ ಜೈಸ್ವಾಲ್ರನ್ನು ಬ್ಯಾಟಿಂಗ್ ವಿಭಾಗದಲ್ಲಿ ಜೀವನಶ್ರೇಷ್ಠ ಆರನೇ ಸ್ಥಾನಕ್ಕೆ ಎತ್ತಿವೆ. ಅವರು ಏಳು ಸ್ಥಾನಗಳನ್ನು ಹಾರಿ ಮೇಲಕ್ಕೆ ಬಂದಿದ್ದಾರೆ.
ಅದೇ ವೇಳೆ, ಬ್ಯಾಟಿಂಗ್ ವಿಭಾಗದಲ್ಲಿ, ಎಡಗೈ ಬ್ಯಾಟರ್ ಶಿವಮ್ ದುಬೆ 265ನೇ ಸ್ಥಾನದಿಂದ 58ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅವರ ಅಜೇಯ 60 ಮತ್ತು 63 ರನ್ಗಳ ಇನಿಂಗ್ಸ್ಗಳು ಇದರಲ್ಲಿ ಮಹತ್ವದ ಪಾತ್ರ ವಹಿಸಿವೆ.
ಬ್ಯಾಟರ್ ಗಳ ಪಟ್ಟಿಯಲ್ಲಿ, ಶುಬ್ಮನ್ ಗಿಲ್ ಏಳು ಸ್ಥಾನಗಳನ್ನು ಮೇಲೇರಿ 60ನೇ ಸ್ಥಾನ ಮತ್ತು ತಿಲಕ್ ವರ್ಮ ಮೂರು ಸ್ಥಾನಗಳನ್ನು ಮೇಲಕ್ಕೆ ಹಾರಿ 61ನೇ ಸ್ಥಾನ ಪಡೆದಿದ್ದಾರೆ.
ಬೌಲರ್ ಗಳ ವಿಭಾಗದಲ್ಲಿ ಅರ್ಶದೀಪ್ ಸಿಂಗ್ ನಾಲ್ಕು ಸ್ಥಾನಗಳನ್ನು ಮೇಲಕ್ಕೆ ಜಿಗಿದು 21ನೇ ಸ್ಥಾನ ಪಡೆದಿದ್ದಾರೆ.







