ಐಸಿಸಿ ಟಿ20 ರ್ಯಾಂಕಿಂಗ್: ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡ ಸೂರ್ಯ
ರಶೀದ್ ಖಾನ್ ಅಗ್ರ-10 ಬೌಲರ್

ಸೂರ್ಯಕುಮಾರ್ ಯಾದವ್ | Photo: NDTV
ನಹೊಸದಿಲ್ಲಿ: ಕಳೆದ ಮೂರು ತಿಂಗಳುಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ದೂರ ಉಳಿದಿದ್ದರೂ ಸೂರ್ಯಕುಮಾರ್ ಯಾದವ್ ಬುಧವಾರ ಬಿಡುಗಡೆಯಾದ ಐಸಿಸಿ ಟಿ20 ರ್ಯಾಂಕಿಂಗ್ ನಲ್ಲಿ ಅಗ್ರ ರ್ಯಾಂಕಿಂಗ್ ನ ಬ್ಯಾಟರ್ ಆಗಿ ಮುಂದುವರಿದಿದ್ದಾರೆ.
ಮುಂಬರುವ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ಸಜ್ಜಾಗಿರುವ ಸೂರ್ಯಕುಮಾರ್ 861 ಅಂಕದೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ 802 ಪಾಯಿಂಟ್ಸ್ ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸ್ಪೋರ್ಟ್ಸ್ ಹರ್ನಿಯಾ ಸರ್ಜರಿಗೆ ಒಳಗಾದ ನಂತರ ಸೂರ್ಯ ಡಿಸೆಂಬರ್ನಿಂದ ಸಕ್ರಿಯ ಕ್ರಿಕೆಟ್ ನಿಂದ ಹೊರಗುಳಿದಿದ್ದಾರೆ.
ಇದೇ ವೇಳೆ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಹೊಸ ಟಿ20 ರ್ಯಾಂಕಿಂಗ್ ನಲ್ಲಿ ಅಗ್ರ-10 ಬೌಲರ್ ಗಳ ಪಟ್ಟಿಯಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಐರ್ಲ್ಯಾಂಡ್ ವಿರುದ್ಧ 2-1 ಅಂತರದಿಂದ ಸರಣಿ ಗೆಲುವಿನಲ್ಲಿ ಗಮನಾರ್ಹ ಕೊಡುಗೆ ನೀಡಿದ ನಂತರ ರಶೀದ್ ಈ ಸಾಧನೆ ಮಾಡಿದ್ದಾರೆ.
25ರ ಹರೆಯದ ಸ್ಪಿನ್ನರ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವಾಪಸಾಗಿದ್ದಾರೆ. ಐರ್ಲ್ಯಾಂಡ್ ವಿರುದ್ಧ 8 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಈ ಪ್ರಭಾವಶಾಲಿ ಪ್ರದರ್ಶನದ ಮೂಲಕ ಹೊಸ ರ್ಯಾಂಕಿಂಗ್ ನಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿ 9ನೇ ಸ್ಥಾನ ತಲುಪಿದ್ದಾರೆ.
ಕಳೆದ ವರ್ಷ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ಗಾಯಗೊಂಡಿದ್ದ ರಶೀದ್ ಐರ್ಲ್ಯಾಂಡ್ ವಿರುದ್ಧ ಸರಣಿಯಲ್ಲಿ 5.62ರ ಸರಾಸರಿಯಲ್ಲಿ 3 ಪಂದ್ಯಗಳಲ್ಲಿ ಒಟ್ಟು 8 ವಿಕೆಟ್ ಗಳನ್ನು ಕಬಳಿಸಿದ್ದರು.
ರಶೀದ್ 2018ರ ಆರಂಭದಲ್ಲಿ ಟಿ20 ಬೌಲರ್ ಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದರು. ಇತ್ತೀಚೆಗಷ್ಟೇ ಅಗ್ರ-10ರಿಂದ ಹೊರಗುಳಿದಿದ್ದರು. ಅಮೆರಿಕ ಹಾಗೂ ವೆಸ್ಟ್ಇಂಡೀಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗಿಂತ ಮೊದಲು ಅಗ್ರ ಸ್ಥಾನಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಐರ್ಲ್ಯಾಂಡ್ ವಿರುದ್ಧ ಸರಣಿಯಲ್ಲಿ 3 ವಿಕೆಟ್ ಗಳನ್ನು ಪಡೆದಿದ್ದ ರಶೀದ್ ಅವರ ಸಹ ಆಟಗಾರ ನವೀನ್ ಉಲ್ ಹಕ್ 2 ಸ್ಥಾನ ಮೇಲಕ್ಕೇರಿ 55ನೇ ಸ್ಥಾನ ತಲುಪಿದ್ದಾರೆ.
ಟಿ20 ಆಲ್ರೌಂಡರ್ ರ್ಯಾಂಕಿಂಗ್ ನಲ್ಲಿ ಬಾಂಗ್ಲಾದೇಶದ ಹಿರಿಯ ಆಟಗಾರ ಶಾಕಿಬ್ ಅಲ್ ಹಸನ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಐರ್ಲ್ಯಾಂಡ್ ನ ಗರೆತ್ ಡೆಲ್ಯಾನಿ ನಾಲ್ಕು ಸ್ಥಾನ ಭಡ್ತಿ ಪಡೆದು 18ನೇ ಸ್ಥಾನಕ್ಕೇರಿದ್ದಾರೆ.







