ಭಾರತ-ಪಾಕ್ ಏಷ್ಯಾ ಕಪ್ ಪಂದ್ಯ: ವಸೀಂ ಅಕ್ರಂ ಹೇಳಿದ್ದೇನು?

Photo- PTI
ಇಸ್ಲಾಮಾಬಾದ್: ದುಬೈನಲ್ಲಿ ಮುಂದಿನ ತಿಂಗಳು ನಡೆಯುವ ಏಷ್ಯಾಕಪ್ ಪಂದ್ಯಾವಳಿಯ ಭಾರತ- ಪಾಕಿಸ್ತಾನ ನಡುವಿನ ಪಂದ್ಯ ಮನೋರಂಜನಾತ್ಮಕವಾಗಿರಬೇಕು ಎಂದು ಖ್ಯಾತ ವೇಗದ ಬೌಲರ್ ವಸೀಂ ಅಕ್ರಂ ಆಶಿಸಿದ್ದಾರೆ. ವೇಳಾಪಟ್ಟಿಯಂತೆ ಸೆಪ್ಟೆಂಬರ್ 14ರಂದು ಈ ಪಂದ್ಯ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿಯನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.
ಈ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧ ಮತ್ತಷ್ಟು ಹಳಸಿದೆ. ಮುಂದಿನ ತಿಂಗಳು ದುಬೈನಲ್ಲಿ ಪರಸ್ಪರ ಎದುರಾಗುವ ವೇಳೆ ಉಭಯ ತಂಡಗಳ ಅಭಿಮಾನಿಗಳು 'ಲಕ್ಷ್ಮಣರೇಖೆ' ದಾಟಬಾರದು ಎಂದು ಕ್ರಿಕೆಟ್ ನ ಸರ್ವಶ್ರೇಷ್ಠ ರಾಯಭಾರಿ ಎನಿಸಿದ ಪಾಕಿಸ್ತಾನ ತಂಡದ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.
"ಭಾರತ- ಪಾಕಿಸ್ತಾನ ನಡುವಿನ ಎಲ್ಲ ಪಂದ್ಯಗಳಂತೆ ಇದು ಕೂಡಾ ಕ್ರಿಕೆಟ್ ಅಭಿಮಾನಿಗಳಿಗೆ ಮುದ ನೀಡುವ ಪಂದ್ಯವಾಗಿರುತ್ತದೆ ಎನ್ನುವುದು ನನ್ನ ಭಾವನೆ. ಆಟಗಾರರು ಮತ್ತು ಅಭಿಮಾನಿಗಳು ಶಿಸ್ತಿನಿಂದ ಇದ್ದು, ನಿಗದಿತ ಗೆರೆ ದಾಟುವುದಿಲ್ಲ ಎಂಬ ನಿರೀಕ್ಷೆ ನನ್ನದು. ಭಾರತೀಯರು ದೇಶಪ್ರೇಮಿಗಳಾಗಿದ್ದು, ಅವರ ತಂಡ ಗೆಲ್ಲಬೇಕು ಎನ್ನುವುದು ಅವರ ಬಯಕೆಯಾದರೆ ಪಾಕಿಸ್ತಾನ ತಂಡದ ಅಭಿಮಾನಿಗಳ ಬಯಕೆಯೂ ಅದೇ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು, ಫೇವರಿಟ್ ಆಗಿ ಹೊರಹೊಮ್ಮಿದೆ. ಆದರೆ ಆ ದಿನದಂದು ಯಾವ ತಂಡ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುತ್ತದೋ ಆ ತಂಡ ಗೆಲ್ಲುತ್ತದೆ" ಎಂದು ಟೆಲಿಕಾಂ ಏಷ್ಯಾ ಸ್ಪೋರ್ಟ್ಸ್ ಜತೆ ಮಾತನಾಡಿದ ಅಕ್ರಂ ವಿಶ್ಲೇಷಿಸಿದರು.
ಅತಿಥೇಯ ಯುಎಇ ವಿರುದ್ಧ ಸೆಪ್ಟೆಂಬರ್ 10ರಂದು ನಡೆಯುವ ಪಂದ್ಯದ ಮೂಲಕ ಭಾರತ ತನ್ನ ಏಷ್ಯಾ ಕಪ್ ಆಭಿಯಾನ ಆರಂಭಿಸಲಿದೆ. ಇದಾದ ಬಳಿಕ ಪಾಕಿಸ್ತಾನ ಜತೆಗೆ ಸೆಪ್ಟೆಂಬರ್ 14ರಂದು ಸೆಣೆಸಲಿದೆ. ಎರಡೂ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಗುಂಪು ಹಂತದ ಕೊನೆಯ ಪಂದ್ಯವನ್ನು ಭಾರತ ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ಆಡಲಿದೆ.







