ಭಾರತದ ಡಿಫೆಂಡರ್ ಅನ್ವರ್ ಅಲಿಗೆ ನಾಲ್ಕು ತಿಂಗಳು ನಿಷೇಧ ಹೇರಿದ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್

ಅನ್ವರ್ ಅಲಿ | PC ; NDTV
ಹೊಸದಿಲ್ಲಿ: ಭಾರತದ ಡಿಫೆಂಡರ್ ಅನ್ವರ್ ಅಲಿ ಅವರು ಮೋಹನ್ ಬಗಾನ್ ಸೂಪರ್ ಜಯಂಟ್ ತೊರೆದು ಈಸ್ಟ್ ಬೆಂಗಾಳ್ಗೆ ಸೇರ್ಪಡೆಯಾಗಿರುವುದು ಕಳೆದ ಕೆಲವು ತಿಂಗಳುಗಳಿಂದ ಬಿಸಿಬಿಸಿ ಚರ್ಚೆಯ ವಿಷಯವಾಗಿತ್ತು. ಮೋಹನ್ ಬಗಾನ್ ಸೂಪರ್ ಜಯಂಟ್ ಜೊತೆಗೆ ನಾಲ್ಕು ವರ್ಷಗಳ ಒಪ್ಪಂದದ ಅವಧಿ ಮುಕ್ತಾಯಕ್ಕೆ ಮೊದಲೇ ಅದನ್ನು ರದ್ದುಗೊಳಿಸಿ ಈಸ್ಟ್ ಬೆಂಗಾಳ್ನೊಂದಿಗೆ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವ ವಿಚಾರದಲ್ಲಿ ಅನ್ವರ್ ತಪ್ಪಿತಸ್ಥರು ಎಂದು ಗುರುತಿಸಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್)ಅನ್ವರ್ ಅವರನ್ನು ನಾಲ್ಕು ತಿಂಗಳ ಕಾಲ ಅಮಾನತುಗೊಳಿಸಲು ನಿರ್ಧರಿಸಿದೆ.
ಅಷ್ಟೇ ಅಲ್ಲ, ಅನ್ವರ್ ಅಲಿ ಒಪ್ಪಂದದ ಪರಿಣಾಮವಾಗಿ ಅವರ ಪೋಷಕ ಕ್ಲಬ್ ಡೆಲ್ಲಿ ಎಫ್ಸಿ ಹಾಗೂ ಅವರು ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿರುವ ಕ್ಲಬ್ ಈಸ್ಟ್ ಬೆಂಗಾಳ್ ಎರಡು ವಿಂಡೋಗಳಿಗಾಗಿ ಹೊಸ ಆಟಗಾರರನ್ನು ನೋಂದಾಯಿಸುವುದನ್ನು ನಿರ್ಬಂಧಿಸಲಾಗಿದೆ.
ಅನ್ವರ್ ಅಲಿ ಅವರು ನಾಲ್ಕು ತಿಂಗಳ ಕ್ರೀಡಾ ನಿಷೇಧವನ್ನು ಎದುರಿಸಲಿದ್ದು, ಈಸ್ಟ್ ಬೆಂಗಾಳ್ ಹಾಗೂ ಡೆಲ್ಲಿ ಎಫ್ಸಿ ಜನವರಿಯಿಂದ ಅನ್ವಯವಾಗುವಂತೆ ಎರಡು ವರ್ಗಾವಣೆ ವಿಂಡೋ ನಿಷೇಧ ಎದುರಿಸಬೇಕಾಗುತ್ತದೆ. ಅನ್ವರ್ ಅಲಿ, ಡೆಲ್ಲಿ ಎಫ್ಸಿ ಹಾಗೂ ಈಸ್ಟ್ ಬೆಂಗಾಳ್ ಮೂರು ಕಡೆಯವರು ಮೋಹನ್ ಬಗಾನ್ಗೆ ಪರಿಹಾರವಾಗಿ 12.90 ಕೋಟಿ ರೂ. ಪಾವತಿಸಬೇಕು ಎಂದು ಎಐಎಫ್ಎಫ್ನ ಆಟಗಾರರ ಸ್ಥಾಯಿ ಸಮಿತಿ(ಪಿಎಸ್ಐ)ಮಂಗಳವಾರ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಭಾರತೀಯ ಫುಟ್ಬಾಲ್ ತಂಡದ ಪ್ರಮುಖ ಡಿಫೆಂಡರ್ ಅಗಿರುವ ಅನ್ವರ್ ಅವರು 2022ರ ಮಾರ್ಚ್ನಲ್ಲಿ ತನ್ನ ಚೊಚ್ಚಲ ಅಂತರ್ರಾಷ್ಟ್ರೀಯ ಪಂದ್ಯವನ್ನು ಆಡಿದ ನಂತರ ಈ ತನಕ 22 ಪಂದ್ಯಗಳನ್ನು ಆಡಿದ್ದಾರೆ. ತ್ರಿ-ರಾಷ್ಟ್ರ ಸಿರೀಸ್(2023), ಇಂಟರ್ಕಾಂಟಿನೆಂಟಲ್ ಕಪ್(2023) ಹಾಗೂ ಸ್ಯಾಫ್ ಚಾಂಪಿಯನ್ಶಿಪ್(2023)ಜಯಿಸಿದ್ದಾರೆ.
23ರ ಹರೆಯದ ಅನ್ವರ್ ಅಂಡರ್-17ರಿಂದ ಸೀನಿಯರ್ ತಂಡದ ತನಕ ಎಲ್ಲ ವಯೋಮಾನದ ಹಂತಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. 2017ರಲ್ಲಿ ಸ್ವದೇಶದಲ್ಲಿ ನಡೆದಿದ್ದ ಅಂಡರ್-17 ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಿದ್ದ ಭಾರತೀಯ ತಂಡದ ಪ್ರಮುಖ ಸದಸ್ಯರಾಗಿದ್ದರು.
ಇಂಡಿಯನ್ ಸೂಪರ್ ಲೀಗ್ನಲ್ಲಿ(ಐಎಸ್ಎಲ್) 2021ರ ನಂತರ ಒಟ್ಟು 46 ಪಂದ್ಯಗಳಲ್ಲಿ ಆಡಿದ್ದಾರೆ.







