ಕುಲದೀಪ್ ಯಾದವ್ ಗೆ ಗಾಯದ ಸಮಸ್ಯೆ, ಡೆಲ್ಲಿ ಕ್ಯಾಪಿಟಲ್ಸ್ ಗೆ ಹಿನ್ನಡೆ

Photo : X/@imkuldeep18
ಹೊಸದಿಲ್ಲಿ: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಸದ್ಯ ಗಾಯದ ಸಮಸ್ಯೆಗೆ ಗುರಿಯಾಗಿದ್ದು, ಈಗ ನಡೆಯುತ್ತಿರುವ ಐಪಿಎಲ್ ವೇಳೆ ಮುನ್ನಚ್ಚರಿಕೆಯ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಟೀಮ್ ಮ್ಯಾನೇಜ್ಮೆಂಟ್ ಕುಲದೀಪ್ ಗೆ ವಿಶ್ರಾಂತಿ ನೀಡಲು ಶಿಫಾರಸು ಮಾಡಿದೆ.
ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಪಂದ್ಯದ ನಂತರ 29ರ ಹರೆಯದ ಕುಲದೀಪ್ ಗೆ ಗಾಯವಾಗಿತ್ತು. ಆ ಪಂದ್ಯವನ್ನು ಡೆಲ್ಲಿ ತಂಡ ಸೋತಿತ್ತು.
ಗಾಯದ ಸಮಸ್ಯೆಯ ಕಾರಣಕ್ಕೆ ಕೆಲವು ಪಂದ್ಯಗಳಿಂದ ಕುಲದೀಪ್ ಹೊರಗುಳಿಯಲಿದ್ದು, ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಡೆಲ್ಲಿ ತಂಡದ ಆಡುವ 11ರ ಬಳಗಕ್ಕೆ ವಾಪಸಾಗಿದ್ದಾರೆ.
ಪಂದ್ಯಕ್ಕೆ ಫಿಟ್ ಆಗಲು ಕುಲದೀಪ್ ಯಾದವ್ ಗೆ ಸ್ವಲ್ಪ ಸಮಯದ ಅಗತ್ಯವಿದೆ ಎಂದು ಕುಲದೀಪ್ ಆರೋಗ್ಯದ ಬಗ್ಗೆ ವಿಚಾರಿಸಿದಾಗ ಐಪಿಎಲ್ ಮೂಲಗಳು ತಿಳಿಸಿವೆ.
ಕೇಂದ್ರ ಗುತ್ತಿಗೆ ಆಟಗಾರನಾಗಿರುವ ಕುಲದೀಪ್ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ. ಕುಲದೀಪ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ(ಎನ್ಸಿಎ) ಸ್ಪೋರ್ಟ್ಸ್ ಸೈನ್ಸ್ ಹಾಗೂ ಮೆಡಿಕಲ್ ಟೀಮ್ ನೊಂದಿಗೆ ತನ್ನನ್ನು ತೊಡಗಿಸಿಕೊಳ್ಳಲಿದ್ದಾರೆ.
ಭಾರತೀಯ ಆಟಗಾರರಿಗೆ ಗಾಯವಾದರೆ ಇಲ್ಲವೇ ಗಾಯದ ಭೀತಿಯಿದ್ದರೆ ಐಪಿಎಲ್ ಫ್ರಾಂಚೈಸಿಗಳು ಎನ್ ಸಿ ಎ ಗೆ ವರದಿ ಮಾಡುವುದು ಕಡ್ಡಾಯವಾಗಿದೆ.
ಕುಲದೀಪ್ ಈ ಬಾರಿಯ ಐಪಿಎಲ್ ನಲ್ಲಿ ಎರಡು ಪಂದ್ಯಗಳಲ್ಲಿ ಮೂರು ವಿಕೆಟ್ ಗಳನ್ನು ಉರುಳಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಕೊನೆಗೊಂಡಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಒಟ್ಟು 19 ವಿಕೆಟ್ ಗಳನ್ನು ಪಡೆದು ಅಮೋಘ ಪ್ರದರ್ಶನ ನೀಡಿದ್ದರು.







