ಮಾರ್ಚ್ 22ರಿಂದ ಮೇ 26ರ ತನಕ ಐಪಿಎಲ್-2024: ವರದಿ

ಐಪಿಎಲ್ | Photo: X \ @ipl
ಹೊಸದಿಲ್ಲಿ: ಮುಂಬರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಮಾರ್ಚ್ 22ರಿಂದ ಮೇ 26ರ ತನಕ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಬಿಸಿಸಿಐ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ತಾತ್ಕಾಲಿಕ ವೇಳಾಪಟ್ಟಿಯ ಕುರಿತು ತನ್ನ ಪಾಲುದಾರರೊಂದಿಗೆ ಚರ್ಚಿಸಿದ್ದು, ಡಬ್ಲ್ಯುಪಿಎಲ್ ಫೆಬ್ರವರಿ 22ರಿಂದ ಮಾ.17ರ ತನಕ ನಡೆಯಲಿದೆ. ಡಬ್ಲ್ಯುಪಿಎಲ್ ಮುಕ್ತಾಯವಾದ 5 ದಿನಗಳ ನಂತರ ಐಪಿಎಲ್ ಆರಂಭವಾಗುತ್ತದೆ ಎಂದು ಕ್ರಿಕ್ ಬಝ್ ವೆಬ್ಸೈಟ್ ವರದಿ ಮಾಡಿದೆ.
ಆದಾಗ್ಯೂ ಐಪಿಎಲ್ ವೇಳಾಪಟ್ಟಿಯ ಕುರಿತು ಯಾವುದೇ ದೃಢೀಕರಣವು ದೇಶದ ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಅವಲಂಬಿತವಾಗಿದೆ. ಲೀಗ್ ಭಾರತದಲ್ಲೇ ಆಯೋಜಿಸಲಾಗುವುದು ಎಂಬ ವಿಶ್ವಾಸದಲ್ಲಿ ಬಿಸಿಸಿಐ ಇದೆ.
ಮಾ. 22ರಿಂದ ಮೇ 26ರ ತನಕದ ವೇಳಾಪಟ್ಟಿಗೆ ಅನುಮತಿ ದೊರೆತರೆ ಭಾರತೀಯ ಕ್ರಿಕೆಟ್ ತಂಡಕ್ಕೆ ಅಮೆರಿಕ ಹಾಗೂ ವೆಸ್ಟ್ಇಂಡೀಸ್ ಆತಿಥ್ಯದಲ್ಲಿ ನಡೆಯುವ ಟಿ-20 ವಿಶ್ವಕಪ್ಗೆ ತಯಾರಾಗಲು ಕೇವಲ ಐದು ದಿನಗಳು ಸಿಗುತ್ತವೆ. ವಿಶ್ವಕಪ್ ಟೂರ್ನಿಯು ಜೂನ್ 2ರಿಂದ ಆರಂಭವಾಗುತ್ತದೆ. ಭಾರತವು ಜೂ.5 ರಂದು ಐರ್ಲ್ಯಾಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.





