ಐಪಿಎಲ್ | ಆಂಡ್ರೆ ರಸೆಲ್ ಬ್ಯಾಟಿಂಗ್ ಅಬ್ಬರ, SRHಗೆ 209 ರನ್ ಗಳ ಬೃಹತ್ ಗುರಿ
ತುಂಬಿ ತುಳುಕಿದ್ದ ಈಡನ್ ಗಾರ್ಡನ್ ನಲ್ಲಿ, KKRನ ಭರ್ಜರಿ ಆಟ

Photo : X/@KKRiders
ಕೋಲ್ಕತಾ, ಮಾ.23: ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಹಾಗೂ ಆಲ್ರೌಂಡರ್ ಆಂಡ್ರೆ ರಸೆಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್ನ 3ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 208 ರನ್ ಕಲೆ ಹಾಕಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕೆಕೆಆರ್ ಪರ ಸಾಲ್ಟ್ 40 ಎಸೆತಗಳಲ್ಲಿ 54 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರೆ, ರಸೆಲ್ 25 ಎಸೆತಗಳಲ್ಲಿ ಔಟಾಗದೆ 64 ರನ್ ಗಳಿಸಿ ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದರು. ಈ ಮೂಲಕ ಕೆಕೆಆರ್ 208 ರನ್ ಗಳಿಸಲು ಮಹತ್ವದ ಕೊಡುಗೆ ನೀಡಿದರು.
ಸಾಲ್ಟ್ ತನ್ನ ಇನಿಂಗ್ಸ್ನಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ಗಳನ್ನು ಸಿಡಿಸಿದರು. ರಸೆಲ್ ಇನಿಂಗ್ಸ್ನಲ್ಲಿ 3 ಬೌಂಡರಿ ಹಾಗೂ ಏಳು ಸಿಕ್ಸರ್ಗಳಿದ್ದವು. ವಿಂಡೀಸ್ನ ರಸೆಲ್ ಐಪಿಎಲ್ನಲ್ಲಿ 200 ಸಿಕ್ಸರ್ ಪೂರೈಸಿದ ಸಾಧನೆ ಮಾಡಿದರು.
ರಮಣ್ದೀಪ್ ಸಿಂಗ್(35 ರನ್, 17 ಎಸೆತ, 1 ಬೌಂಡರಿ, 4 ಸಿಕ್ಸರ್) ಹಾಗೂ ರಿಂಕು ಸಿಂಗ್(23 ರನ್, 15 ಎಸೆತ, 3 ಬೌಂಡರಿ)ಕೂಡ ಉಪಯುಕ್ತ ಕಾಣಿಕೆ ನೀಡಿ ತಂಡದ ಮೊತ್ತ ಹೆಚ್ಚಲು ನೆರವಾದರು.
ಕೆಕೆಆರ್ 51 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 5ನೇ ವಿಕೆಟ್ಗೆ 54 ರನ್ ಸೇರಿಸಿದ ಸಾಲ್ಟ್ ಹಾಗೂ ರಮಣ್ ಸಿಂಗ್ ತಂಡವನ್ನು ಆಧರಿಸಿದರು. ಕೆಕೆಆರ್ 119 ರನ್ಗೆ 6 ವಿಕೆಟ್ ಕಳೆದುಕೊಂಡಾಗ ಜೊತೆಯಾದ ರಸೆಲ್ ಹಾಗೂ ರಿಂಕು ಸಿಂಗ್ 81 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಸನ್ರೈಸರ್ಸ್ ಹೈದರಾಬಾದ್ ಪರ ಮಯಾಂಕ್ ಮರ್ಕಂಡೆ(2-39) ಹಾಗೂ ಟಿ.ನಟರಾಜನ್(3-32)ಐದು ವಿಕೆಟ್ಗಳನ್ನು ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
ಕೋಲ್ಕತಾ ನೈಟ್ ರೈಡರ್ಸ್: 208/7
(ಆಂಡ್ರೆ ರಸೆಲ್ ಔಟಾಗದೆ 64, ಫಿಲ್ ಸಾಲ್ಟ್ 54, ರಮಣ್ದೀಪ್ ಸಿಂಗ್ 35, ಟಿ.ನಟರಾಜನ್ 3-32, ಮಯಾಂಕ್ ಮರ್ಕಂಡೆ 2-39)







