IPL | ಕೆಕೆಆರ್ ವಿರುದ್ಧ ರಾಜಸ್ಥಾನಕ್ಕೆ ಜಯ, ಗೆಲುವಿನ ರೂವಾರಿಯಾದ ಬಟ್ಲರ್

Photo : x/@IPL
ಕೋಲ್ಕತಾ : ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ (ಔಟಾಗದೆ 107 ರನ್, 60 ಎಸೆತ, 9 ಬೌಂಡರಿ, 6 ಸಿಕ್ಸರ್) ಏಕಾಂಗಿ ಹೋರಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ನ 31ನೇ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 2 ವಿಕೆಟ್ ಅಂತರದಿಂದ ರೋಚಕವಾಗಿ ಮಣಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 224 ರನ್ ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 20 ಓವರ್ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ತಲುಪಿತು. ರಾಜಸ್ಥಾನದ ಪರ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್(ಔಟಾಗದೆ 107 ರನ್)ಸರ್ವಾಧಿಕ ಸ್ಕೋರ್ ಗಳಿಸಿದ್ದಾರೆ. ರಿಯಾನ್ ಪರಾಗ್ 34 ರನ್ ಗಳಿಸಿದರು.
2ನೇ ಓವರ್ನಲ್ಲಿ ಜೈಸ್ವಾಲ್(19 ರನ್)ವಿಕೆಟನ್ನು ಕಳೆದುಕೊಂಡ ರಾಜಸ್ಥಾನ ಕಳಪೆ ಆರಂಭ ಪಡೆಯಿತು. ನಾಯಕ ಸಂಜು ಸ್ಯಾಮ್ಸನ್(12 ರನ್)ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಧ್ರುವ ಜುರೆಲ್(2 ರನ್), ಆರ್.ಅಶ್ವಿನ್(8 ರನ್) ಹಾಗೂ ಶಿಮ್ರೊನ್ ಹೆಟ್ಮೆಯರ್(0)ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆಗ ಬಟ್ಲರ್ ದಿಟ್ಟ ಪ್ರದರ್ಶನ ನೀಡಿ ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟರು.
ಕೆಕೆಆರ್ ಪರ ಸುನೀಲ್ ನರೇನ್(2-30), ವರುಣ್ ಚಕ್ರವರ್ತಿ(2-36) ಹಾಗೂ ಹರ್ಷಿತ್ ರಾಣಾ(2-45) ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಕೋಲ್ಕತಾ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ಟ್ವೆಂಟಿ-20 ಕ್ರಿಕೆಟ್ನಲ್ಲಿ ಸುನೀಲ್ ನರೇನ್ ಸಿಡಿಸಿದ ಚೊಚ್ಚಲ ಶತಕದ(109 ರನ್, 56 ಎಸೆತ, 13 ಬೌಂಡರಿ, 6 ಸಿಕ್ಸರ್) ನೆರವಿನಿಂದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 223 ರನ್ ಗಳಿಸುವಲ್ಲಿ ಶಕ್ತವಾಯಿತು.
ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್(10 ರನ್)ವಿಕೆಟನ್ನು 4ನೇ ಓವರ್ನಲ್ಲಿ ಕಳೆದುಕೊಂಡ ಕೆಕೆಆರ್ ಕಳಪೆ ಆರಂಭ ಪಡೆದಿತ್ತು. ಸಾಲ್ಟ್ ಬೇಗನೆ ಔಟಾಗಿದ್ದರೂ ಪವರ್ಪ್ಲೇ ವೇಳೆ ಕೆಕೆಆರ್ ಅಬ್ಬರಿಸಿತು. ಸುನೀಲ್ ಹಾಗೂ ರಘುವಂಶಿ(30 ರನ್, 18 ಎಸೆತ, 5 ಬೌಂಡರಿ)ಎರಡನೇ ವಿಕೆಟ್ಗೆ 85 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ರಘುವಂಶಿ ಔಟಾಗುವ ಮೊದಲು ಅಮೂಲ್ಯ 30 ರನ್ ಕೊಡುಗೆ ನೀಡಿದರು. ನಾಯಕ ಶ್ರೇಯಸ್ ಅಯ್ಯರ್ ಕೇವಲ 11 ರನ್ ಗಳಿಸಿ ಔಟಾದರು. ಸುನೀಲ್ ನರೇನ್ ಒಮ್ಮೆ ತನ್ನ ಲಯ ಕಂಡುಕೊಂಡ ನಂತರ ಹಿಂತಿರುಗಿ ನೋಡಿಲ್ಲ. ವೆಸ್ಟ್ಇಂಡೀಸ್ ನ ಸಹ ಆಟಗಾರ ಆ್ಯಂಡ್ರೆ ರಸೆಲ್(13 ರನ್)ಜೊತೆಗೂಡಿ 4ನೇ ವಿಕೆಟ್ ಗೆ 51 ರನ್ ಸೇರಿಸಿ ಎದುರಾಳಿ ಬೌಲರ್ಗಳ ಎದುರು ಪ್ರಾಬಲ್ಯ ಸಾಧಿಸಿದರು. ನರೇನ್ ಕೇವಲ 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ ತನ್ನ ಚೊಚ್ಚಲ ಶತಕ ಸಿಡಿಸಿದರು. ಬ್ರೆಂಡನ್ ಮೆಕಲಮ್ ಹಾಗೂ ವೆಂಕಟೇಶ್ ಅಯ್ಯರ್ ಬಳಿಕ ಭಾರತೀಯ ಟಿ-20 ಲೀಗ್ ನಲ್ಲಿ ಶತಕ ಗಳಿಸಿದ ಕೋಲ್ಕತಾ ತಂಡದ ಮೂರನೇ ಬ್ಯಾಟರ್ ಎನಿಸಿಕೊಂಡರು.
ರಿಂಕು ಸಿಂಗ್(ಔಟಾಗದೆ 20, 9 ಎಸೆತ, 1 ಬೌಂಡರಿ, 2 ಸಿಕ್ಸರ್)ಕೆಲವು ಆಕರ್ಷಕ ಹೊಡೆತದ ಮೂಲಕ ಕೆಕೆಆರ್ 6 ವಿಕೆಟ್ ಗಳ ನಷ್ಟಕ್ಕೆ 223 ರನ್ ಗಳಿಸಲು ನೆರವಾದರು.
ಸದ್ಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರಾಜಸ್ಥಾನದ ಬೌಲಿಂಗ್ ವಿಭಾಗದಲ್ಲಿ ಅವೇಶ್ ಖಾನ್(2-35) ಹಾಗೂ ಕುಲದೀಪ್ ಸೇನ್(2-46) ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು.
ಟ್ರೆಂಟ್ ಬೌಲ್ಟ್(1-31) ಹಾಗೂ ಯಜುವೇಂದ್ರ ಚಹಾಲ್(1-54) ತಲಾ ಒಂದು ವಿಕೆಟ್ ಗಳನ್ನು ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಕೋಲ್ಕತಾ ನೈಟ್ ರೈಡರ್ಸ್: 20 ಓವರ್ಗಳಲ್ಲಿ 223/6
(ಸುನೀಲ್ ನರೇನ್ 109, ರಘುವಂಶಿ 30, ರಿಂಕು ಸಿಂಗ್ ಔಟಾಗದೆ 20, ಅವೇಶ್ ಖಾನ್ 2-35, ಕುಲದೀಪ್ ಸೇನ್ 2-46)
ರಾಜಸ್ಥಾನ ರಾಯಲ್ಸ್: 20 ಓವರ್ಗಳಲ್ಲಿ 224/8
(ಜೋಸ್ ಬಟ್ಲರ್ 74, ಪರಾಗ್ 34, ರೊವ್ಮನ್ ಪೊವೆಲ್ 26, ಸುನೀಲ್ ನರೇನ್ 2-30, ಹರ್ಷಿತ್ ರಾಣಾ 2-45, ವರುಣ್ ಚಕ್ರವರ್ತಿ 2-36)







