ಇಶಾನ್ ಕಿಶನ್ ಟಿ20 ವಿಶ್ವಕಪ್ ತಂಡದಲ್ಲಿರುತ್ತಾರೆಯೇ?: ದ್ರಾವಿಡ್ ಹೇಳಿದ್ದು ಹೀಗೆ...

Photo: PTI
ಮುಂಬೈ: ಮುಂದಿನ ಜೂನ್ ತಿಂಗಳಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಬಗ್ಗೆ ಬಿರುಸಿನ ಚರ್ಚೆಗಳು ನಡೆಯುತ್ತಿದ್ದು, ಪ್ರತಿಭಾವಂತ ಯುವ ಆಟಗಾರ ಇಶಾನ್ ಕಿಶನ್ ತಂಡದ ಲೆಕ್ಕಾಚಾರದಲ್ಲಿ ಇನ್ನೂ ಇದ್ದಾರೆ ಎನ್ನುವ ಅಂಶವನ್ನು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ದೃಢಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ವರೆಗೂ ಮೂರೂ ಬಗೆಯ ಕ್ರಿಕೆಟ್ನಲ್ಲಿ ಭಾರತ ತಂಡದ ಭಾಗವಾಗಿದ್ದ ಇಶಾನ್ ಕಿಶನ್, ಮಾನಸಿಕ ಬಳಲಿಕೆಯ ಕಾರಣ ನೀಡಿ ದಿಢೀರನೇ ದುಬೈಗೆ ಮರಳಿದ್ದರಿಂದ, ವಿಶ್ವಕಪ್ ತಂಡದಲ್ಲಿ ಇರುವ ಬಗ್ಗೆ ಊಹಾಪೋಹಗಳು ಮೂಡಿದ್ದವು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಿಗೆ ಕಿಶನ್ ಹೆಸರು ಇರಲಿಲ್ಲ ಹಾಗೂ ಈ ಎಡಗೈ ಆಟಗಾರನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಸರಣಿ ಆರಂಭಕ್ಕೆ ಮುನ್ನ ದ್ರಾವಿಡ್ ಅವರ ಬಳಿ ಈ ಬಗ್ಗೆ ಕೇಳಿದಾಗ, ಕಿಶನ್ ಆಯ್ಕೆಗೆ ಲಭ್ಯರಿರಲಿಲ್ಲ ಎಂಬ ಮಾಹಿತಿ ನೀಡಿದ್ದರು. ಆದರೆ ಇಂಗ್ಲೆಂಡ್ ಪ್ರವಾಸಕ್ಕೆ ಪರಿಗಣಿಸುವ ಮುನ್ನ ಅವರು ಪ್ರಥಮದರ್ಜೆ ಕ್ರಿಕೆಟ್ ಆಡಬೇಕಾಗಬಹುದು ಎಂಬ ಸುಳಿವು ನೀಡಿದ್ದರು.
ಏತನ್ಮಧ್ಯೆ ಕಿಶನ್ ಅವರು ಹಾರ್ದಿಕ್ ಪಾಂಡ್ಯ ಜತೆಗೆ ತರಬೇತಿ ಪಡೆಯುತ್ತಿರುವುದು ಕಂಡುಬಂದಿದ್ದು, ಕ್ರಿಕೆಟ್ ಆಡಲು ಅವರು ಮಾನಸಿಕವಾಗಿ ಸಮರ್ಥರಿದ್ದಾರೆ ಎನ್ನುವುದರ ಸೂಚನೆ ಇದಾಗಿದೆ. ಆದರೆ ಭಾರತದ ಆಯ್ಕೆಗೆ ಅವರು ಏಕೆ ಲಭ್ಯರಿರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕಿಶನ್ ಆ ಬಳಿಕ ಜಾರ್ಖಂಡ್ ಪರ ಯಾವುದೇ ಪಂದ್ಯ ಆಡಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಪ್ರಕಟವಾಗಿರುವ ಭಾರತೀಯ ತಂಡದಲ್ಲೂ ಅವರ ಹೆಸರು ಇಲ್ಲ.
ಕಿಶನ್ ಅವರ ಕ್ರಿಕೆಟ್ ಭವಿಷ್ಯ ಮಬ್ಬಾಗುತ್ತಿದೆ ಎಂಬ ವದಂತಿಗಳ ನಡುವೆಯೇ ದ್ರಾವಿಡ್ ಶುಭ ಸುದ್ದಿ ನೀಡಿದ್ದಾರೆ. ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್ ಅವರಂತೆ ಕಿಶನ್ ಕೂಡಾ ಭಾರತೀಯ ಟಿ20 ತಂಡದ ರೇಸ್ನಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ ಅವರ ಹೆಸರುನ್ನೂ ದ್ರಾವಿಡ್ ಹೇಳಿದ್ದಾರೆ.
"ಕೀಪಿಂಗ್ನಲ್ಲಿ ನಮಗೆ ಹಲವು ಒಳ್ಳೆಯ ಆಯ್ಕೆಗಳಿವೆ. ಸಂಜು ಅಥವಾ ಜಿತೇಶ್; ರಾಹುಲ್, ಇಶಾನ್ ಹಾಗೂ ರಿಷಭ್ ಹೀಗೆ ಹಲವು ಮಂದಿ ಇದ್ದಾರೆ. ಮುಂದಿನ ತಿಂಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕು" ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.







