ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿ | ಚೊಚ್ಚಲ ಎಟಿಪಿ ಮಾಸ್ಟರ್ಸ್-1000 ಪ್ರಶಸ್ತಿ ಬಾಚಿಕೊಂಡ ಜ್ಯಾಕ್ ಡ್ರೇಪರ್

ಜ್ಯಾಕ್ ಡ್ರೇಪರ್ | PC : ATP Tour
ಕ್ಯಾಲಿಫೋರ್ನಿಯಾ: ಡೆನ್ಮಾರ್ಕ್ ಆಟಗಾರ ಹೋಲ್ಗರ್ ರೂನ್ ಅವರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸಿರುವ ಬ್ರಿಟನ್ ಆಟಗಾರ ಜ್ಯಾಕ್ ಡ್ರೇಪರ್ ಇಂಡಿಯನ್ಸ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ತನ್ನ ಚೊಚ್ಚಲ ಎಟಿಪಿ ಮಾಸ್ಟರ್ಸ್-1000 ಪ್ರಶಸ್ತಿಯನ್ನು ಬಾಚಿಕೊಂಡರು.
ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವದ 14ನೇ ರ್ಯಾಂಕಿನ ಆಟಗಾರ ಡ್ರೇಪರ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದು ಕೇವಲ 69 ನಿಮಿಷಗಳಲ್ಲಿ 13ನೇ ರ್ಯಾಂಕಿನ ರೂನ್ರನ್ನು 6-2, 6-2 ಸೆಟ್ ಗಳ ಅಂತರದಿಂದ ಸೋಲಿಸಿದರು. ಈ ಗೆಲುವಿನ ಹಿನ್ನೆಲೆಯಲ್ಲಿ ಡ್ರೇಪರ್ ಎಟಿಪಿ ರ್ಯಾಂಕಿಂಗ್ ನಲ್ಲಿ 7ನೇ ಸ್ಥಾನಕ್ಕೇರಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
‘‘ಇದು ಅದ್ಭುತವಾಗಿದೆ. ಇಲ್ಲಿ ಆಡಲು ಸಾಧ್ಯವಾಗಿರುವುದಕ್ಕೆ, ನನ್ನ ಮನಸ್ಸಿನಲ್ಲಿ ಉತ್ತಮ ಭಾವನೆ ಮೂಡಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಹಾಗೂ ಸಂತೋಷವಾಗಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನಾನು ಮಾಡಿದ್ದ ಎಲ್ಲ ಕೆಲಸಗಳು ಬೃಹತ್ ವೇದಿಕೆಯ ಮೇಲೆ ಒಟ್ಟಿಗೆ ಬರುತ್ತಿರುವಂತೆ ಭಾಸವಾಗುತ್ತಿದೆ. ಅದನ್ನು ನನಗೆ ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ’’ಎಂದು 2023ರಲ್ಲಿ ಭುಜ ಹಾಗೂ ಹೊಟ್ಟೆಯಲ್ಲಿನ ಗಾಯದ ಸಮಸ್ಯೆ ಹಾಗೂ 2025ಕ್ಕಿಂತ ಮೊದಲು ಸ್ನಾಯುಸೆಳೆತದಂತಹ ಸವಾಲುಗಳನ್ನು ಎದುರಿಸಿದ್ದ 23ರ ಹರೆಯದ ಡ್ರೇಪರ್ ಹೇಳಿದ್ದಾರೆ.
ಡ್ರೇಪರ್ ತಾನಾಡಿದ ಮೊದಲ ಮಾಸ್ಟರ್ಸ್-1000 ಟೂರ್ನಿಯ ಫೈನಲ್ ಪಂದ್ಯದ ಆರಂಭದಲ್ಲಿ ಹಿಡಿತ ಸಾಧಿಸಿ 4-0 ಮುನ್ನಡೆ ಪಡೆದರು. ಆರಂಭಿಕ ಸೆಟ್ ನ ಸರ್ವ್ನಲ್ಲಿ ಕೇವಲ 4 ಪಾಯಿಂಟ್ಸ್ ಕಳೆದುಕೊಂಡರು. ರೂನ್ 10 ಅನಗತ್ಯ ತಪ್ಪೆಸಗಿದರು.
ವೃತ್ತಿಜೀವನದಲ್ಲಿ ಮೂರನೇ ಪ್ರಶಸ್ತಿ ಗೆದ್ದುಕೊಂಡಿರುವ ಡ್ರೇಪರ್ ಫೈನಲ್ ಗೆ ತಲುಪುವ ಮೊದಲು ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಹಾಗೂ 2022ರ ಇಂಡಿಯನ್ ವೆಲ್ಸ್ ವಿನ್ನರ್ ಟೇಲರ್ ಫ್ರಿಟ್ಝ್ ಹಾಗೂ ಅಮೆರಿಕದ ಬಿಗ್ ಹಿಟ್ಟರ್ ಬೆನ್ ಶೆಲ್ಟನ್ ಸವಾಲನ್ನು ಹಿಮ್ಮೆಟ್ಟಿಸಿದ್ದರು.
ಡ್ರೇಪರ್ 2024ರಲ್ಲಿ ಉಳಿದೆರಡು ಎಟಿಪಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.







