ಜೂನಿಯರ್ ಶೂಟಿಂಗ್ ವಿಶ್ವಕಪ್ : ಚಿನ್ನ ಗೆದ್ದ ಅನುಷ್ಕಾ, ಅಡ್ರಿಯಾನ್ಗೆ ಬೆಳ್ಳಿ

PC : @airnewsalerts
ಹೊಸದಿಲ್ಲಿ,ಸೆ.28: ಭಾರತೀಯ ಶೂಟರ್ ಅನುಷ್ಕಾ ಥೋಕುರ್ ತುಘಲಕ್ಬಾದ್ನಲ್ಲಿರುವ ಡಾ.ಕರ್ಣಿ ಸಿಂಗ್ ರೇಂಜ್ನಲ್ಲಿ ರವಿವಾರ ನಡೆದ ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ನಲ್ಲಿ ಮಹಿಳೆಯರ 50 ಮೀ. ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ.
ಅನುಷ್ಕಾ 461.0 ಅಂಕ ಗಳಿಸಿ ಮೊದಲ ಸ್ಥಾನ ಪಡೆದರೆ, ವೈಯಕ್ತಿಕ ತಟಸ್ಥ ಅತ್ಲೀಟ್ಗಳಾದ ಅನಸ್ಟೇಸಿಯಾ ಸೊರಿಕಿನಾ(454.9) ಹಾಗೂ ಮರಿಯಾ ಕ್ರಗ್ಲೋವಾ (444.0) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.
ಅನುಷ್ಕಾ ಪ್ರಸಕ್ತ ಪಂದ್ಯಾವಳಿಯಲ್ಲಿ ತನ್ನ 2ನೇ ಚಿನ್ನದ ಪದಕ ಜಯಿಸಿದ್ದಾರೆ. ಈ ಮೊದಲು 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಅಗ್ರ ಸ್ಥಾನ ಪಡೆದಿದ್ದರು.
ಇದೇ ವೇಳೆ, ಸ್ಪರ್ಧೆಯಲ್ಲಿದ್ದ ಇತರ ಭಾರತೀಯರಾದ ಮಹಿತ್ ಸಂಧು(422.7) ಹಾಗೂ ಪ್ರಾಚಿ ಗಾಯಕ್ವಾಡ್(399.3) ಕ್ರಮವಾಗಿ 5ನೇ ಹಾಗೂ 7ನೇ ಸ್ಥಾನ ಪಡೆದಿದ್ದಾರೆ.
ಜೂನಿಯರ್ ಪುರುಷರ ಸ್ಪರ್ಧಾವಳಿಯಲ್ಲಿ ಅಡ್ರಿಯಾನ್ ಕರ್ಮಾಕರ್ ಅವರು 454.8 ಅಂಕ ಗಳಿಸಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ತಟಸ್ಥ ಅತ್ಲೀಟ್ಗಳಾದ ಡಿಮಿಟ್ರಿ ಪಿಮೆನೋವ್(459.9) ಚಿನ್ನ ಹಾಗೂ ಕಮಿಲ್ ನುರಿಯಾಖ್ಮೆಟೋವ್ ಕಂಚಿನ ಪದಕ ಜಯಿಸಿದರು.
ಅಡ್ರಿಯಾನ್ ಅವರ ಸಹ ಆಟಗಾರರಾದ ವೇದಾಂತ್ ನಿತಿನ್ ವಾಘ್ಮೋರೆ(420.9) ಹಾಗೂ ಸಮಿವುಲ್ಲಾ ಖಾನ್ (393.0) ಕ್ರಮವಾಗಿ 5ನೇ ಹಾಗೂ 7ನೇ ಸ್ಥಾನ ಪಡೆದಿದ್ದಾರೆ.
ಭಾರತೀಯ ತಂಡವು ರವಿವಾರ 2 ಪದಕಗಳನ್ನು ಗೆಲ್ಲುವ ಮೂಲಕ 4 ಚಿನ್ನ, 6 ಬೆಳ್ಳಿ ಹಾಗೂ 3 ಕಂಚಿನ ಪದಕದೊಂದಿಗೆ ಪದಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.







