ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಟೇಬಲ್ ಟೆನಿಸ್ ತೊರೆದ ಕನ್ನಡತಿ ಅರ್ಚನಾ ಕಾಮತ್

ಅರ್ಚನಾ ಕಾಮತ್ | PC : PTI
ಹೊಸದಿಲ್ಲಿ : ಇತ್ತೀಚೆಗೆ ಕೊನೆಗೊಂಡಿರುವ ಪ್ಯಾರಿಸ್ ಒಲಿಂಪಿಕ್ಸ್-2024ರಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿದ್ದ 24ರ ಹರೆಯದ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್ ಕ್ರೀಡೆ ತೊರೆಯಲು ನಿರ್ಧರಿಸಿದ್ದಾರೆ.
ಟೇಬಲ್ ಟೆನಿಸ್ ನಲ್ಲಿ ಯಾವುದೇ ಆರ್ಥಿಕ ಭವಿಷ್ಯ ಇಲ್ಲ ಎಂದು ಕಂಡುಕೊಂಡಿರುವ ಯುವ ಟೇಬಲ್ ಟೆನಿಸ್ ತಾರೆ ಅರ್ಚನಾ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಅಂತಿಮ-8ರ ಸುತ್ತು ತಲುಪಿದ್ದ ಭಾರತದ ಮಹಿಳೆಯರ ಟೇಬಲ್ ಟೆನಿಸ್ ತಂಡ ಇತಿಹಾಸ ನಿರ್ಮಿಸಿತ್ತು. ಆದರೆ ಭಾರತವು ಕ್ವಾರ್ಟರ್ ಫೈನಲ್ ನಲ್ಲಿ ಜರ್ಮನಿಯ ವಿರುದ್ಧ 1-3 ಅಂತರದಿಂದ ಸೋಲನುಭವಿಸಿ ಸ್ಪರ್ಧೆಯಿಂದ ಹೊರಬಿದ್ದಿತ್ತು. ಅರ್ಚನಾ ಕಾಮತ್ ಮಾತ್ರ ಒಂದು ಪಂದ್ಯದಲ್ಲಿ ಜಯಶಾಲಿಯಾಗಿದ್ದರು.
2028ರ ಲಾಸ್ ಏಂಜಲೀಸ್ ಗೇಮ್ಸ್ ನಲ್ಲಿ ಪದಕ ಗೆಲ್ಲುವ ಯಾವುದೇ ಗ್ಯಾರಂಟಿ ಇಲ್ಲದಿರುವುದರಿಂದ ವೃತ್ತಿಪರ ಟೇಬಲ್ ಟೆನಿಸ್ ಅನ್ನು ತ್ಯಜಿಸಲು ನಿರ್ಧರಿಸಿರುವ ಅರ್ಚನಾ ಅವರು ವಿದೇಶದಲ್ಲಿ ಶಿಕ್ಷಣವನ್ನು ಮುಂದುವರಿಸಲು ತೀರ್ಮಾನಿಸಿದ್ದಾರೆ.
ಪ್ಯಾರಿಸ್ ಗೇಮ್ಸ್ನಿಂದ ಮನೆಗೆ ಹಿಂದಿರುಗಿದ ನಂತರ ಅರ್ಚನಾ ಮುಂದಿನ ಪಂದ್ಯಗಳಲ್ಲಿ ಪದಕ ಗೆಲ್ಲುವ ಸಾಧ್ಯತೆ ಬಗ್ಗೆ ತನ್ನ ತರಬೇತುದಾರ ಅನ್ಶುಲ್ ಗಾರ್ಗ್ ಅವರೊಂದಿಗೆ ಚರ್ಚಿಸಿದ್ದರು. ಅರ್ಚನಾ ಅವರ ನಿಲುವಿನಿಂದ ಅಚ್ಚರಿಗೊಂಡ ಕೋಚ್ ಪ್ರಾಮಾಣಿಕ ಪ್ರತಿಕ್ರಿಯೆ ನೀಡಲು ನಿರ್ಧರಿಸಿದರು.
ಇದು ಕಷ್ಟ ಎಂದು ನಾನು ಆಕೆಗೆ ಹೇಳಿದೆ. ಇದು ತುಂಬಾ ಕಠಿಣ ಪರಿಶ್ರಮ ತೆಗೆದುಕೊಳ್ಳುತ್ತದೆ. ಅರ್ಚನಾ ಸದ್ಯ ವಿಶ್ವದ ಟಾಪ್-100ಗಿಂತ ಹೊರಗಿದ್ದಾರೆ. ಆದರೆ ಅವರು ಕಳೆದ 2 ತಿಂಗಳುಗಳಲ್ಲಿ ಸಾಕಷ್ಟು ಸುಧಾರಿಸಿದ್ದಾರೆ. ಆಕೆ ಈಗಾಗಲೇ ಕ್ರೀಡೆ ತ್ಯಜಿಸಲು ಮನಸ್ಸು ಮಾಡಿದಂತೆ ಕಾಣುತ್ತಿದೆ. ಒಮ್ಮೆ ಆಕೆ ಮನಸ್ಸು ಮಾಡಿದರೆ ಅದನ್ನು ಬದಲಾಯಿಸುವುದು ಕಷ್ಟ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಗಾರ್ಗ್ ಹೇಳಿದ್ದಾರೆ.
ವಿಶ್ವದ ನಂ.1 ಆಟಗಾರ್ತಿ ಸನ್ ಯಿಂಗ್ಶಾರನ್ನು ಮಣಿಸಿದ್ದ ಅಹಿಕಾ ಮುಖರ್ಜಿ ಬದಲಿಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದ ಅರ್ಚನಾ ಅವರು ಚರ್ಚೆಗೆ ಗ್ರಾಸವಾಗಿದ್ದರು. ತನ್ನ ಆಯ್ಕೆಯ ಕುರಿತು ಚರ್ಚೆಗೆ ತಲೆಕೆಡಿಸಿಕೊಳ್ಳದ ಅರ್ಚನಾ ತನ್ನ ಆಟದತ್ತ ಗಮನ ಹರಿಸಿದ್ದರು. ಜರ್ಮನಿ ವಿರುದ್ಧ 1-3ರಿಂದ ಸೋತಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತವು ಏಕೈಕ ಪಂದ್ಯ ಜಯಿಸಲು ನೆರವಾಗಿದ್ದರು.
ನನ್ನ ಸಹೋದರ ನಾಸಾದಲ್ಲಿ ಕೆಲಸ ಮಾಡುತ್ತಿದ್ದಾನೆ. ಆತ ನನ್ನ ರೋಲ್ ಮಾಡೆಲ್. ಆತ ಕೂಡ ನನಗೆ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹಿಸುತ್ತಿದ್ದಾನೆ. ಹಾಗಾಗಿ ನನ್ನ ಎಲ್ಲ ಶಿಕ್ಷಣವನ್ನು ಪೂರ್ಣಗೊಳಿಸಲು ಬಿಡುವು ಮಾಡಿಕೊಳ್ಳುತ್ತಿದ್ದೇನೆ. ನನಗೆ ಅಧ್ಯಯನ ಅಂದರೆ ಇಷ್ಟ. ಅದನ್ನು ಆನಂದಿಸುತ್ತೇನೆ. ಶಿಕ್ಷಣದಲ್ಲೂ ನಾನು ಉತ್ತಮವಾಗಿದ್ದೇನೆ ಎಂದು ಅರ್ಚನಾ ಹೇಳಿದ್ದಾರೆ.
ಅರ್ಚನಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಟಿಟಿ ವೃತ್ತಿಜೀವನದ ಜೊತೆಗೆ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು ತನ್ನ ಅಧ್ಯಯನ ಮುಂದುವರಿಸಿದ್ದಾಳೆ. ಇತ್ತೀಚೆಗೆ ಸ್ನಾತಕೋತ್ತರ ಪದವಿಗೆ ಪೂರ್ವ ತಯಾರಿಯನ್ನು ಪೂರ್ಣಗೊಳಿಸಿದ್ದಾಳೆ. 15 ವರ್ಷಗಳಿಗೂ ಹೆಚ್ಚು ಕಾಲ ಸಂಪೂರ್ಣ ಸಮರ್ಪಣೆ ಹಾಗೂ ಉತ್ಸಾಹದಿಂದ ಟೇಬಲ್ ಟೆನಿಸ್ ಆಡಿದ್ದಾಳೆ. ಈ ಮೂಲಕ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾಳೆ. ಕ್ರೀಡೆ ಹಾಗೂ ದೇಶಕ್ಕಾಗಿ ಅತ್ಯುತ್ತಮವಾದುದನ್ನು ನೀಡಿದ ನಂತರ ಅರ್ಚನಾ ಯಾವುದೇ ಬೇಸರವಿಲ್ಲದೆ ಈ ಕಠಿಣ ಹೆಜ್ಜೆಯನ್ನು ಇಟ್ಟಿದ್ದಾಳೆ ಎಂದು ಅರ್ಚನಾರ ತಂದೆ ಗಿರೀಶ್ ಕಾಮತ್ ಹೇಳಿದ್ದಾರೆ.
ಪ್ರಮುಖ ಆಟಗಾರರಿಗೆ ಸಾಮಾನ್ಯವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ. ಏಕೆಂದರೆ ಅವರು ಹೆಚ್ಚಿನ ಬೆಂಬಲ ಪಡೆಯುತ್ತಾರೆ. ಆದರೆ ಯುವ ಆಟಗಾರರು ಏನು ಮಾಡಬೇಕು? ಅವರು ತರಬೇತಿ ಹಾಗೂ ಸಲಕರಣೆಗಳ ವಿಚಾರದಲ್ಲಿ ಬೆಂಬಲ ಪಡೆಯುತ್ತಾರೆ. ಆದರೆ ಜೀವನೋಪಾಯಕ್ಕೆ ಏನು ಮಾಡಬೇಕು. ಇದು ಅವರಿಗೆ ಕಷ್ಟವಾಗುತ್ತದೆ. ಆದ್ದರಿಂದ ಅರ್ಚನಾ ಅವರ ನಿರ್ಧಾರ ಅರ್ಥವಾಗುವಂತಹದ್ದಾಗಿದೆ ಎಂದು ಕೋಚ್ ಗಾರ್ಗ್ ಹೇಳಿದ್ದಾರೆ.







