ಕೊಂಕಾಕಾಫ್ ಚಾಂಪಿಯನ್ಸ್ ಕಪ್: ಇಂಟರ್ ಮಯಾಮಿ ಕ್ವಾರ್ಟರ್ ಫೈನಲ್ ಗೆ

Photo : twitter/InterMiamiCF
ಹೊಸದಿಲ್ಲಿ : ಇಂಟರ್ ಮಯಾಮಿ ತಂಡವು ಕೊಂಕಾಕಾಫ್ ಚಾಂಪಿಯನ್ಸ್ ಕಪ್ ಪಂದ್ಯಾವಳಿಯ ಕ್ವಾಟರ್ ಫೈನಲ್ ತಲುಪಿದೆ. ಬುಧವಾರ ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದು ನ್ಯಾಶ್ವಿಲ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿದೆ.
ಇಂಟರ್ ಮಯಾಮಿ ಸ್ಟ್ರೈಕರ್ಗಳಾದ ಲೂಯಿಸ್ ಸುವಾರೆಝ್ ಮತ್ತು ಲಿಯೊನೆಲ್ ಮೆಸ್ಸಿ ಅದ್ಭುತ ನಿರ್ವಹಣೆ ನೀಡಿದರು. ಎಂಟನೇ ನಿಮಿಷದಲ್ಲಿ ಮೆಸ್ಸಿ ನೀಡಿದ ಪಾಸ್ ಮೂಲಕ ಸುವಾರೆಝ್ ಮೊದಲ ಗೋಲನ್ನು ಬಾರಿಸಿದರು. ಬಳಿಕ 23ನೇ ನಿಮಿಷದಲ್ಲಿ ಸ್ವತಃ ಮೆಸ್ಸಿ ಗೋಲು ಬಾರಿಸಿದರು.
ಆದರೆ, 50ನೇ ನಿಮಿಷದಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ ಮೆಸ್ಸಿಯ ಸ್ಥಾನದಲ್ಲಿ ಆಡಲು ಬದಲಿ ಆಟಗಾರ ಅಂಗಣಕ್ಕೆ ಇಳಿದರು.
ಮೆಸ್ಸಿಯ ಅನುಪಸ್ಥಿತಿಯ ಹೊರತಾಗಿಯೂ ಮಯಾಮಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. 63ನೇ ನಿಮಿಷದಲ್ಲಿ ರಾಬರ್ಟ್ ಟೇಲರ್ ಹೆಡರ್ ಮೂಲಕ ಬಾರಿಸಿದ ಗೋಲಿನ ಮೂಲಕ ತಂಡದ ಸ್ಥಿತಿಯನ್ನು ಬಲಪಡಿಸಿದರು.
ಇನ್ನೊಂದು ಪಂದ್ಯದಲ್ಲಿ, ಹೆರೆಡಿಯಾನೊ ತಂಡವು ರಾಬಿನ್ಹುಡ್ ತಂಡದ ವಿರುದ್ಧ 1-1 ಗೋಲುಗಳಿಂದ ಡ್ರಾ ಮಾಡಿಕೊಂಡು ಕ್ವಾರ್ಟರ್ಫೈನಲ್ ತಲುಪಿದೆ.
ಅದೇ ವೇಳೆ, ಕ್ಲಬ್ ಅಮೆರಿಕ ತಂಡವು ಚಿವಾಸ್ ಗ್ವಾಡಲಜರ ತಂಡವನ್ನು 3-0 ಅಂತರದಿಂದ ಸೋಲಿಸಿ ಕ್ವಾಟರ್ ಫೈನಲ್ ಪ್ರವೇಶಿಸಿದೆ.





