ಪ್ಯಾರಿಸ್ ಒಲಿಂಪಿಕ್ಸ್ನಿಂದ ಹೊರಗುಳಿದ ಲಾಂಗ್ಜಂಪ್ ಪಟು ಮುರಳಿ ಶ್ರೀಶಂಕರ್

PC : PTI
ಚೆನ್ನೈ: ತರಬೇತಿಯ ವೇಳೆ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ 2024ರ ಪ್ಯಾರಿಸ್ ಒಲಿಂಪಿಕ್ಸ್ನಿಂದ ನಾನು ಹೊರಗುಳಿಯುತ್ತಿರುವೆ ಎಂದು ಭಾರತದ ಲಾಂಗ್ಜಂಪ್ ಪಟು ಮುರಳಿ ಶ್ರೀಶಂಕರ್ ಗುರುವಾರ ತಿಳಿಸಿದ್ದಾರೆ.
ನಾನು ಮಂಗಳವಾರ ತರಬೇತಿ ನಿರತನಾಗಿದ್ದಾಗ ಮೊಣಕಾಲಿಗೆ ಗಾಯವಾಗಿದೆ. ಎಲ್ಲ ಪರೀಕ್ಷೆಗಳು ಹಾಗೂ ಸಮಾಲೋಚನೆಗಳ ನಂತರ ನನಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ನಿರ್ಧರಿಸಲಾಯಿತು. ಹಲವು ವರ್ಷಗಳಿಂದ ಪಟ್ಟುಬಿಡದೆ ಬೆನ್ನಟ್ಟಿದ ಒಂದೇ ಒಂದು ಗುರಿಯಿಂದ ನಾನು ವಿಮುಖನಾಗುತ್ತಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ಯಾಂಕಾಕ್ನಲ್ಲಿ ನಡೆದ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 8.37 ಮೀ. ದೂರಕ್ಕೆ ಜಿಗಿದಿದ್ದ ಶ್ರೀಶಂಕರ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದರು.ಈ ಪ್ರಯತ್ನದ ಮೂಲಕ ಟೂರ್ನಿಯಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು.
ಅರ್ಜುನ ಪ್ರಶಸ್ತಿ ವಿಜೇತ ಶ್ರೀಶಂಕರ್ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ಗೆ ಅರ್ಹತೆ ಪಡೆದಿರುವ ಭಾರತದ ಏಕೈಕ ಅತ್ಲೀಟ್ ಆಗಿದ್ದರು. 2023ರಲ್ಲಿ ಜೆಸ್ವಿನ್ ಅಲ್ಡ್ರಿನ್ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ತಲುಪಿದ್ದರು. ಆದರೆ ಅವರು ಇನ್ನಷ್ಟೇ ಅರ್ಹತೆ ಪಡೆಯಬೇಕಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಲಾಂಗ್ಜಂಪ್ನಲ್ಲಿ ಅರ್ಹತೆ ಪಡೆಯಲು 8.27 ಮೀ.ದೂರ ಜಿಗಿಯಬೇಕಾಗಿದೆ.
25ರ ಹರೆಯದ ಶ್ರೀಶಂಕರ್ 2022ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ಹಾಗೂ 2022ರಲ್ಲಿ ಹಾಂಗ್ಝೌನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಬಾಚಿಕೊಂಡಿದ್ದರು. 2021ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್ನಲ್ಲಿ 7.69 ಮೀ.ದೂರಕ್ಕೆ ಜಿಗಿದಿದ್ದ ಶ್ರೀಶಂಕರ್ 13ನೇ ಸ್ಥಾನ ಪಡೆದು ಫೈನಲ್ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದರು.







