ಮಹಾರಾಜ ಟಿ-20 ಟ್ರೋಫಿ: ಸಿಕ್ಸರ್ ಬಾರಿಸಿ ಗಮನ ಸೆಳೆದ ರಾಹುಲ್ ದ್ರಾವಿಡ್ ಪುತ್ರ ಸಮಿತ್
ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ

ರಾಹುಲ್ ದ್ರಾವಿಡ್ ಪುತ್ರ ಸಮಿತ್ | PC : X
ಬೆಂಗಳೂರು: ಮಹಾರಾಜ ಟಿ-20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಅಮೋಘ ಸಿಕ್ಸರ್ ಸಿಡಿಸುವ ಮೂಲಕ ಭಾರತದ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಅಭಿಮಾನಿಗಳ ಮನಸೂರೆಗೊಂಡರು.
ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸಮಿತ್, ಮೊದಲೆರಡು ಪಂದ್ಯಗಳಲ್ಲಿ ಕೇವಲ ಒಂದಂಕಿಯ ಸ್ಕೋರ್ ಗಳಿಸಿ ಅಭಿಮಾನಿಗಳಿಗೆ ನಿರಾಶೆಯನ್ನುಂಟು ಮಾಡಿದ್ದರು. ಅವರು ಮೊದಲೆರಡು ಪಂದ್ಯಗಳಲ್ಲಿ ಕೇವಲ 7 ರನ್ ಮಾತ್ರ ಗಳಿಸಲು ಶಕ್ತವಾಗಿದ್ದರು. ಆದರೆ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಎದುರಿನ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳುವ ಮೂಲಕ, ಅಮೋಘ ಸಿಕ್ಸರ್ ಸಿಡಿಸಿದರು. ಆ ಸಿಕ್ಸರ್ ನೋಡಿದ ಅನೇಕ ಅಭಿಮಾನಿಗಳು, ಸಮಿತ್ ಹಾಗೂ ರಾಹುಲ್ ದ್ರಾವಿಡ್ ಬ್ಯಾಟಿಂಗ್ ವೈಖರಿ ನಡುವಿನ ಹೋಲಿಕೆಯ ಕುರಿತು ಚರ್ಚೆ ಪ್ರಾರಂಭಿಸಿದ್ದಾರೆ.
ಮಳೆಯಿಂದ ವ್ಯತ್ಯಯಗೊಂಡ ಪಂದ್ಯದಲ್ಲಿ ಸಮಿತ್ ಪ್ರತಿನಿಧಿಸುತ್ತಿರುವ ಮೈಸೂರು ವಾರಿಯರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ನಾಲ್ಕು ವಿಕೆಟ್ ಗಳಿಂದ ಪರಾಭವಗೊಂಡಿತು. ಆದರೆ, ಸಮಿತ್ ಸಿಡಿಸಿದ ಸಿಕ್ಸರ್ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.





