ಡಿ.10ಕ್ಕೆ ಪುರುಷರ ಜೂನಿಯರ್ ವಿಶ್ವಕಪ್ ಫೈನಲ್ ಪಂದ್ಯ; ಏಳು ಬಾರಿಯ ಚಾಂಪಿಯನ್ ಜರ್ಮನಿಗೆ ಸ್ಪೇನ್ ಎದುರಾಳಿ

Photo Credit: JOTHI RAMALINGAM B \ thehindu.com
ಚೆನ್ನೈ, ಡಿ.9: FIH ಪುರುಷರ ಹಾಕಿ ಜೂನಿಯರ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಬುಧವಾರ ನಡೆಯಲಿದ್ದು, ಏಳು ಬಾರಿಯ ಚಾಂಪಿಯನ್ ಜರ್ಮನಿ ತಂಡವು ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸ್ಪೇನ್ ತಂಡವನ್ನು ಎದುರಿಸಲಿದೆ.
ಜರ್ಮನಿ ತಂಡವು ಅಂಡರ್-21 ಹಾಕಿ ಪಂದ್ಯಾವಳಿಯಲ್ಲಿ ಐತಿಹಾಸಿಕ ಎಂಟನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಸ್ಪೇನ್ ತಂಡ ಮೊತ್ತ ಮೊದಲ ವಿಶ್ವ ಪ್ರಶಸ್ತಿಯ ಕನಸು ಕಾಣುತ್ತಿದೆ.
ಚೆನ್ನೈ ಹಾಗೂ ಮದುರೈನಗರಗಳಲ್ಲಿ ನಡೆದ ಪಂದ್ಯಾವಳಿಯ ಎರಡನೇ ಸೆಮಿ ಫೈನಲ್ ನಲ್ಲಿ ಜರ್ಮನಿ ತಂಡವು ಆತಿಥೇಯ ಭಾರತ ತಂಡವನ್ನು 5-1 ಅಂತರದಿಂದ ಮಣಿಸಿ ಫೈನಲ್ ಗೆ ಪ್ರವೇಶಿಸಿತ್ತು.
ಪುರುಷರ ಯುರೋಹಾಕಿ ಅಂಡರ್-21 ಹಾಲಿ ಚಾಂಪಿಯನ್ ಸ್ಪೇನ್ ತಂಡವು ಮತ್ತೊಂದು ಸೆಮಿ ಫೈನಲ್ನಲ್ಲಿ ಅರ್ಜೆಂಟೀನ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಫೈನಲ್ಗೆ ತಲುಪಿದ ಮೊದಲ ತಂಡ ಎನಿಸಿಕೊಂಡಿತು.
►ಕಂಚಿನ ಪದಕಕ್ಕಾಗಿ ಭಾರತ-ಅರ್ಜೆಂಟೀನ ಹಣಾಹಣಿ
ಜೂನಿಯರ್ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಅವಕಾಶದಿಂದ ವಂಚಿತರಾಗಿರುವ ಭಾರತದ ಹಾಕಿ ತಂಡವು ಬುಧವಾರ ಕಂಚಿನ ಪದಕಕ್ಕಾಗಿ ನಡೆಯಲಿರುವ ಪ್ಲೇ ಆಫ್ ಪಂದ್ಯದಲ್ಲಿ ಅರ್ಜೆಂಟೀನ ತಂಡದೊಂದಿಗೆ ಸೆಣಸಾಡಲಿದೆ.
ಭಾರತ ತಂಡವು 9 ವರ್ಷಗಳ ಹಿಂದೆ 2016ರಲ್ಲಿ ಲಕ್ನೊದಲ್ಲಿ ಕೊನೆಯ ಬಾರಿ ಪ್ರಶಸ್ತಿಯನ್ನು ಜಯಿಸಿತ್ತು. ರವಿವಾರ ನಡೆದ ಸೆಮಿ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಜರ್ಮನಿ ತಂಡದ ವಿರುದ್ಧ 1-5 ಅಂತರದಿಂದ ಸೋತಿತ್ತು.
ಮತ್ತೊಮ್ಮೆ ಪ್ರಶಸ್ತಿ ವಂಚಿತರಾಗಿರುವ ಭಾರತವು ತನ್ನೆಲ್ಲಾ ತಪ್ಪುಗಳನು ತಿದ್ದಿಕೊಂಡು ಕನಿಷ್ಠ ಕಂಚಿನ ಪದಕದೊಂದಿಗೆ ಪಂದ್ಯಾವಳಿಗೆ ವಿದಾಯ ಹೇಳುವ ವಿಶ್ವಾಸದಲ್ಲಿದೆ.
ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನ ತಂಡ ಭಾರತಕ್ಕೆ ಸುಲಭ ತುತ್ತಾಗಲಾರದು. ಈ ತಂಡವು ಪಂದ್ಯಾವಳಿಯಲ್ಲಿ ಈಗಾಗಲೇ ತನ್ನ ಪರಾಕ್ರಮ ತೋರಿದೆ.
ಅರ್ಜೆಂಟೀನ ತಂಡವು 2005 ಹಾಗೂ 2021ರಲ್ಲಿ ಜೂನಿಯರ್ ವಿಶ್ವಕಪ್ ಗೆದ್ದುಕೊಂಡಿದೆ. ಸೆಮಿ ಫೈನಲ್ ನಲ್ಲಿ ಸ್ಪೇನ್ ವಿರುದ್ಧ 1-2 ಗೋಲುಗಳ ಅಲ್ಪ ಅಂತರದಿಂದ ಸೋಲುಂಡಿದೆ.







