ನಿವೃತ್ತಿಗಾಗಿ ನೀಲ್ ವಾಗ್ನರ್ ಗೆ ಒತ್ತಾಯಿಸಲಾಗಿದೆ: ರಾಸ್ ಟೇಲರ್
ಹೊಸದಿಲ್ಲಿ: ವೇಗದ ಬೌಲರ್ ನೀಲ್ ವಾಗ್ನರ್ ನಿವೃತ್ತಿ ಪಡೆಯಲು ಒತ್ತಾಯಪಡಿಸಲಾಗಿದೆ ಎಂದು ನ್ಯೂಝಿಲ್ಯಾಂಡ್ ನ ಮಾಜಿ ಸ್ಟಾರ್ ಬ್ಯಾಟರ್ ರಾಸ್ ಟೇಲರ್ ಆರೋಪಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಆಡುವ 11ರ ಬಳಗದಲ್ಲಿ ನೀವು ಇರುವುದಿಲ್ಲ ಎಂದು ಮಾಹಿತಿ ನೀಡಿದ ಹೊರತಾಗಿಯೂ ವಾಗ್ನರ್ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು.
37ರ ಹರೆಯದ ವಾಗ್ನರ್ ಮೊದಲ ಟೆಸ್ಟ್ನಲ್ಲಿ ಬದಲಿ ಫೀಲ್ಡರ್ ಆಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಆಗಾಗ್ಗೆ ಆಟಗಾರರಿಗೆ ತಂಪು ಪಾನೀಯವನ್ನು ಸರಬರಾಜು ಮಾಡುವ ಕೆಲಸ ಮಾಡಿದ್ದರು.
ನನಗೆ ಈಗ ಸ್ವಲ್ಪ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಇದು ವಾಗ್ನರ್ ಅವರ ಬಲವಂತದ ನಿವೃತ್ತಿ ಎಂದು ನಾನು ಭಾವಿಸುತ್ತೇನೆ. ವಾಗ್ನರ್ ಪತ್ರಿಕಾಗೋಷ್ಠಿಯನ್ನು ಆಲಿಸಿದರೆ ಅವರು ಈ ಟೆಸ್ಟ್ ಪಂದ್ಯದ ನಂತರ ನಿವೃತ್ತಿ ಆಗುವವರಿದ್ದರು. ಹೀಗಾಗಿ ಅವರು ಸ್ವತಃ ಆಯ್ಕೆಗೆ ಲಭ್ಯವಿದ್ದರು ಎಂದು ಟೇಲರ್ ಹೇಳಿದ್ದಾರೆ.
ಕಳೆದ ವಾರ ವಾಗ್ನರ್ ನಿವೃತ್ತಿ ಪ್ರಕಟಿಸಿದ್ದರು. 64 ಟೆಸ್ಟ್ ಪಂದ್ಯಗಳನ್ನಾಡಿದ್ದ ಅವರು ಒಟ್ಟು 260 ವಿಕೆಟ್ ಗಳನ್ನು ಪಡೆಯುವ ಮೂಲಕ ನ್ಯೂಝಿಲ್ಯಾಂಡ್ ಪರ ಐದನೇ ಗರಿಷ್ಠ ವಿಕೆಟ್ ಪಡೆದಿದ್ದರು. ವಾಗ್ನರ್ರನ್ನು ಸ್ವದೇಶದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಕಿವೀಸ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ನೀವು ಎರಡೂ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಅವರು ವಾಗ್ನರ್ಗೆ ತಿಳಿಸಿದ್ದರು. ಹೀಗಾಗಿ ಅವರು ಕೋಚ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವುದಾಗಿ ಕಣ್ಣೀರಿಡುತ್ತಾ ಘೋಷಿಸಿದ್ದರು.
ದಕ್ಷಿಣ ಆಫ್ರಿಕಾದ ಪ್ರಿಟೋರಿಯದಲ್ಲಿ ಜನಿಸಿ, ಅಲ್ಲೇ ಬೆಳೆದಿದ್ದ ವಾಗ್ನರ್ 2008ರಲ್ಲಿ ನ್ಯೂಝಿಲ್ಯಾಂಡ್ ಗೆ ವಲಸೆ ಹೋಗಿದ್ದರು. ತನ್ನನ್ನು ದತ್ತು ಪಡೆದ ದೇಶ ನ್ಯೂಝಿಲ್ಯಾಂಡ್ ವಿಶ್ವ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಲು ಹಾಗೂ 2021ರಲ್ಲಿ ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯ್ಶಿಪ್ ಪ್ರಶಸ್ತಿಯನ್ನು ಜಯಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು







