2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆ ಹೊಸದಿಲ್ಲಿ ಆತಿಥ್ಯ

ಸಾಂದರ್ಭಿಕ ಚಿತ್ರ (PC : PTI)
ಹೊಸದಿಲ್ಲಿ, ಸೆ.1: ಆಗಸ್ಟ್ 2026ರಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆ ಹೊಸದಿಲ್ಲಿಯನ್ನು ಆತಿಥೇಯ ನಗರವನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ(ಬಿಡಬ್ಲ್ಯುಎಫ್)ಸೋಮವಾರ ಪ್ರಕಟಿಸಿದೆ.
ಕ್ರೀಡೆಯ ಅತ್ಯಂತ ಪ್ರತಿಷ್ಠಿತ ಪಂದ್ಯಾವಳಿಯು 17 ವರ್ಷಗಳ ನಂತರ ಭಾರತಕ್ಕೆ ಮರಳಲಿದೆ. 2009ರಲ್ಲಿ ಹೈದರಾಬಾದ್ ನಗರವು ಚಾಂಪಿಯನ್/ಶಿಪ್ ನ ಆತಿಥ್ಯ ವಹಿಸಿತ್ತು.
ಪ್ಯಾರಿಸ್ ನಲ್ಲಿ ನಡೆದ 2025ರ ಆವೃತ್ತಿಯ ಚಾಂಪಿಯನ್ಶಿಪ್ ಸಮಾರೋಪ ಸಮಾರಂಭದ ವೇಳೆ ಈ ಪ್ರಕಟನೆ ಹೊರಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಬಿಡಬ್ಲ್ಯುಎಫ್ ಅಧ್ಯಕ್ಷ ಖುನ್ ಯಿಂಗ್ ಪಟಾಮಾ, ಫ್ರಾನ್ಸ್ ಬ್ಯಾಡ್ಮಿಂಟನ್ ಒಕ್ಕೂಟದ ಅಧ್ಯಕ್ಷ ಫ್ರಾಂಕ್ ಲಾರೆಂಟ್ ಹಾಗೂ ಭಾರತದ ಬ್ಯಾಡ್ಮಿಂಟನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ನಡುವೆ ಸಾಂಕೇತಿಕ ಹಸ್ತಾಂತರ ಪ್ರಕ್ರಿಯೆ ನಡೆಯಿತು.
‘‘ಭಾರತವು ಕೂಡ ಪ್ಯಾರಿಸ್ ನಂತೆಯೇ ಯಶಸ್ವಿಯಾಗಿ ಪಂದ್ಯಾವಳಿಯನ್ನು ಆಯೋಜಿಸುವ ಕುರಿತು ನಾವು ಭರವಸೆ ನೀಡುತ್ತೇವೆ. ಹೊಸದಿಲ್ಲಿಗೆ ಬ್ಯಾಡ್ಮಿಂಟನ್ ಕುಟುಂಬವನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ’’ಎಂದು ಮಿಶ್ರಾ ಹೇಳಿದ್ದಾರೆ.
ದಿಲ್ಲಿಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಡೆಯುವ ಮೂಲಕ 8 ವರ್ಷಗಳ ನಂತರ ಟೂರ್ನಿಯು ಏಶ್ಯಕ್ಕೆ ವಾಪಸಾಗಲಿದೆ. 2018ರಲ್ಲಿ ಚೀನಾದ ನಾನ್ ಜಿಂಗ್ ನಲ್ಲಿ ಕೊನೆಯ ಬಾರಿ ಚಾಂಪಿಯನ್ ಶಿಪ್ ನಡೆದಿತ್ತು.
2011ರಿಂದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನಲ್ಲಿ ಭಾರತ ಪದಕವನ್ನು ಗೆಲ್ಲುತ್ತಾ ಬಂದಿದೆ. ಈ ವರ್ಷ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. 2019ರಲ್ಲಿ ಪಿ.ವಿ. ಸಿಂಧು ಭಾರತಕ್ಕೆ ಮೊತ್ತ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಸೈನಾ 2015ರಲ್ಲಿ ಬೆಳ್ಳಿ ಹಾಗೂ 2017ರಲ್ಲಿ ಕಂಚು ಜಯಿಸಿದ್ದರು.
ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಪುರುಷರೂ ಪದಕ ಗೆದ್ದಿದ್ದಾರೆ. ಕೆ.ಶ್ರೀಕಾಂತ್(ಬೆಳ್ಳಿ, 2021), ಸಾಯಿ ಪ್ರಣೀತ್(ಕಂಚು,2019), ಲಕ್ಷ್ಯ ಸೇನ್(ಕಂಚು,2021) ಹಾಗೂ ಎಚ್.ಎಸ್.ಪ್ರಣಯ್(ಕಂಚು, 2023)ಪದಕ ಜಯಿಸಿ ವಿಶ್ವ ಮಟ್ಟದಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡಲು ನೆರವಾಗಿದ್ದರು.







