ಪ್ಯಾರಿಸ್ ಪ್ಯಾರಾಲಿಂಪಿಕ್ಸ್ | ವಿಶ್ವ ದಾಖಲೆಯತ್ತ ಭಾರತದ ಇನ್ನೋರ್ವ ಜಾವೆಲಿನ್ ಸ್ಟಾರ್ ಸುಮಿತ್ ಚಿತ್ತ

Photo Source: World Para Athletics Twitter
ಹೊಸದಿಲ್ಲಿ : ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಎಸೆತಗಾರ ಸುಮಿತ್ ಅಂಟಿಲ್ ಮುಂಬರುವ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್ನಲ್ಲಿ ತನ್ನ ಪ್ರಶಸ್ತಿಯನ್ನುಉಳಿಸಿಕೊಳ್ಳುವ ಜೊತೆಗೆ ತನ್ನ ವಿಶ್ವ ದಾಖಲೆಯನ್ನು ಉತ್ತಮಪಡಿಸಿಕೊಳ್ಳುವತ್ತ ಚಿತ್ತಹರಿಸಿದ್ದಾರೆ.
ಆಗಸ್ಟ್ 28ರಿಂದ ಸೆಪ್ಟಂಬರ್ 8ರ ತನಕ ನಡೆಯಲಿರುವ ಪ್ಯಾರಾಲಿಂಪಿಕ್ ಗೇಮ್ಸ್ ನ ಉದ್ಘಾಟನಾ ಸಮಾರಂಭದಲ್ಲಿ ಸುಮಿತ್ ಅವರು ಭಾಗ್ಯಶ್ರೀ ಜಾಧವ್(ಶಾಟ್ಪುಟ್, ಎಫ್34 ವಿಭಾಗ)ಅವರೊಂದಿಗೆ ಧ್ವಜಧಾರಿಯಾಗಲಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಮೂರು ಬಾರಿ ವಿಶ್ವ ದಾಖಲೆ ನಿರ್ಮಿಸಿದ್ದ ಸುಮಿತ್ 68.55 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದ್ದರು.
2023ರ ಪ್ಯಾರಾ ವಿಶ್ವ ಚಾಂಪಿಯನ್ಶಿಪ್ ನಲ್ಲಿ 70.83 ಮೀ.ದೂರಕ್ಕೆ ಜಾವೆಲಿನ್ ಎಸೆದು ನೂತನ ವಿಶ್ವ ದಾಖಲೆ ನಿರ್ಮಿಸಿದ್ದ ಸುಮಿತ್ ಅವರು ಹಾಂಗ್ಝೌ ಪ್ಯಾರಾ ಏಶ್ಯನ್ ಗೇಮ್ಸ್(2023)ನಲ್ಲಿ 73.29 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದ್ದರು. ಈ ಮೂಲಕ ತನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಂಡಿದ್ದರು.
80 ಮೀ.ದೂರಕ್ಕೆ ಜಾವೆಲಿನ್ ಎಸೆಯುವುದು ನನ್ನ ದೀರ್ಘಾವಧಿಯ ಗುರಿಯಾಗಿದೆ. ಆದರೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ 75 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುವೆ ಎಂದು ಪಿಟಿಐ-ಭಾಷಾಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ 26ರ ಹರೆಯದ ಸುಮಿತ್ ಹೇಳಿದ್ದಾರೆ.
2015ರಲ್ಲಿ ನಡೆದಿದ್ದ ಅಪಘಾತವೊಂದರಲ್ಲಿ ತನ್ನ ಒಂದು ಅಂಗವನ್ನು ಕಳೆದುಕೊಂಡಿದ್ದ ಅಥ್ಲೀಟ್ ಸುಮಿತ್ ಈ ವರ್ಷದ ಮೇನಲ್ಲಿ ನಡೆದಿದ್ದ ಪ್ಯಾರಾ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ 69.50 ಮೀ.ಪ್ರಯತ್ನದೊಂದಿಗೆ ಚಿನ್ನದ ಪದಕ ಜಯಿಸಿದ್ದರು.
ಅಭ್ಯಾಸದ ವೇಳೆ ನನ್ನ ಎಸೆತಗಳು ಸಾಕಷ್ಟು ಸ್ಥಿರವಾಗಿವೆ.ನನ್ನ ತಂತ್ರವನ್ನು ಬದಲಾಯಿಸದೆ ಬಲವನ್ನು ಹೆಚ್ಚಿಸಲು ನಾನು ಶ್ರಮಿಸಿದ್ದೇನೆ. ನನ್ನ ಹಿಂದಿನ ದಾಖಲೆಯನ್ನು ಸುಧಾರಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಸುಮಿತ್ ಹೇಳಿದರು.
ಹಾಲಿ ಚಾಂಪಿಯನ್ ಆಗಿರುವ ಹಾಗೂ ಭಾರತದ ಧ್ವಜಧಾರಿಯಾಗಿರುವ ಸುಮಿತ್ ಬಳಿ ಒತ್ತಡದ ಬಗ್ಗೆ ಕೇಳಿದಾಗ, ಸದ್ಯ ನನಗೆ ಯಾವುದೇ ಒತ್ತಡವಿಲ್ಲ. ಆದರೆ ಪ್ಯಾರಿಸ್ ತಲುಪಿದ ನಂತರ ಏನಾಗುತ್ತದೆ ಎಂದು ನೋಡಬೇಕು. ಒಮ್ಮೆ ಕ್ರೀಡಾಗ್ರಾಮ ಇಲ್ಲವೇ ಸ್ಪರ್ಧೆಯ ಸ್ಥಳ ತಲುಪಿದ ನಂತರ ಕೆಲವೊಂದು ವಿಷಯಗಳು ಸ್ವಲ್ಪ ಬದಲಾವಣೆ ಆಗುತ್ತದೆ. ಒತ್ತಡಕ್ಕೆ ಮಣಿಯದೆ ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ನಾನು ಈ ಕ್ಷಣವನ್ನು ಆನಂದಿಸಲು ಬಯಸುತ್ತೇನೆ. ಇದೇ ಮೊದಲ ಬಾರಿ ಭಾರತದಿಂದ ಇಷ್ಟೊಂದು ದೊಡ್ಡ ಹಾಗೂ ಬಲಿಷ್ಠ ಅಥ್ಲೀಟ್ ಗಳನ್ನು ಒಳಗೊಂಡ ತಂಡವು ಪ್ಯಾರಾಲಿಂಪಿಕ್ಸ್ ನಲ್ಲಿ ಸ್ದರ್ಧಿಸಲು ತೆರಳುತ್ತಿದೆ. ಧ್ವಜಧಾರಿಯಾಗಲು ನಾನು ಹೆಮ್ಮೆಪಡುತ್ತೇನೆ ಎಂದು ಹೇಳಿದರು.
ಪ್ಯಾರಾಲಿಂಪಿಕ್ಸ್ ನಲ್ಲಿ 12 ಸ್ಪರ್ಧೆಗಳಲ್ಲಿ ಭಾರತವು 84 ಅಥ್ಲೀಟ್ ಗಳನ್ನು ಕಣಕ್ಕಿಳಿಸಲಿದೆ.
ಪ್ಯಾರಾಲಿಂಪಿಕ್ಸ್ ನಂತಹ ಸ್ಪರ್ಧೆಗಳಲ್ಲಿ ಧ್ವಜಧಾರಿಯಾಗುವುದು ವಿಭಿನ್ನ ರೀತಿಯ ಭಾವುಕದ ಕ್ಷಣವಾಗಿದೆ. ಇದೇ ಮೊದಲ ಬಾರಿ ಪ್ಯಾರಾಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿರುವೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಕೋವಿಡ್-19 ಕಾರಣಕ್ಕೆ ಸಾಕಷ್ಟು ನಿರ್ಬಂಧಗಳಿದ್ದವು. ನನ್ನ ಸ್ಪರ್ಧಾವಳಿಯ ವೇಳಾಪಟ್ಟಿಯ ಪ್ರಕಾರ ನಾನು ತಡವಾಗಿ ಅಲ್ಲಿಗೆ ತಲುಪಿದ್ದೆ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಸುಮಿತ್ ಹೇಳಿದ್ದಾರೆ.
ನಾನು ತುಂಬಾ ಸೀಮಿತ ಸ್ಪರ್ಧಾವಳಿಗಳಲ್ಲಿ ಭಾಗವಹಿಸಿದ್ದೇನೆ. ಅಭ್ಯಾಸದಲ್ಲಿ ಹೆಚ್ಚಿನ ಸಮಯ ಕಳೆದಿದ್ದೇನೆ. ಸ್ಪರ್ಧೆಗಳು ನಡೆಯುತ್ತಲೇ ಇರುತ್ತವೆ. ಆದರೆ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ನನ್ನ ಗುರಿಯಾಗಿದೆ. ಕಳೆದ 3 ವರ್ಷಗಳಲ್ಲಿ ನನ್ನ ಸಂಪೂರ್ಣ ಗಮನ ಇದರ ಮೇಲೆ ಕೇಂದ್ರೀಕೃತವಾಗಿದೆ. ನಾನು ವಿದೇಶಕ್ಕಿಂತ ಹೆಚ್ಚಾಗಿ ಭಾರತದಲ್ಲೇ ಅಭ್ಯಾಸ ನಡೆಸಲು ಬಯಸುವೆ. ನಾನು 2018ರಲ್ಲಿ ಫಿನ್ಲ್ಯಾಂಡ್ ಗೆ ಹೋಗಿದ್ದೆ. ಆದರೆ ಅಲ್ಲಿ ನನಗೆ ಹೆಚ್ಚಿನ ಸುಧಾರಣೆ ಕಂಡುಬರಲಿಲ್ಲ. ನಾನು ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಸೋನಿಪತ್ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತೇನೆ. ಇಲ್ಲಿ ಜಾವೆಲಿನ್ ಎಸೆತಕ್ಕಾಗಿ ಟ್ರ್ಯಾಕ್ ಇದೆ. ವಿಶ್ವ ದರ್ಜೆಯ ವ್ಯವಸ್ಥೆಗಳು ಇಲ್ಲಿ ಲಭ್ಯವಿದೆ ಎಂದು ಸುಮಿತ್ ಹೇಳಿದ್ದಾರೆ.
ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದಕ್ಕೆ ನಿಮಗೂ ಸ್ವಲ್ಪ ಬೇಸರವಾಗಿದೆಯೇ ಎಂದು ಸುಮಿತ್ರಲ್ಲಿ ಕೇಳಿದಾಗ, ನೀರಜಣ್ಣ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಪ್ರದರ್ಶನದಿಂದ ಬೇಸರವಾಗಿದೆ ಎಂದರೆ ತಪ್ಪಾಗುತ್ತದೆ. ಒಲಿಂಪಿಕ್ಸ್ ನಂತಹ ವೇದಿಕೆಯಲ್ಲಿ ಒತ್ತಡದ ಪರಿಸ್ಥಿತಿಯಲ್ಲಿ ವರ್ಷದ ಶ್ರೇಷ್ಠ ಪ್ರದರ್ಶನ ನೀಡುವುದು ಕಷ್ಟಕರ.ಅವರು 90 ಮೀ. ಮಾರ್ಕ್ ಕ್ರಮಿಸಿದರೆ ನಾವು ಮತ್ತಷ್ಟು ಚಿನ್ನದ ಪದಕ ಗೆಲ್ಲಬಹುದು ಎಂದರು.







