ಬೆಂಗಳೂರಿನಲ್ಲಿ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್
ಐಟಿ ರಾಜಧಾನಿಗೆ ಬಂದಿಳಿದ ದೇಶದ ಅಗ್ರಮಾನ್ಯ ಕುಸ್ತಿಪಟುಗಳು

ಸಾಂದರ್ಭಿಕ ಚಿತ್ರ (Credit:X)
ಬೆಂಗಳೂರು: ದೇಶದ ಐಟಿ ರಾಜಧಾನಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಡಿ. 6ರಿಂದ 8ರ ತನಕ ನಡೆಯಲಿರುವ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ದೇಶದ ಅಗ್ರಮಾನ್ಯ ಕುಸ್ತಿಪಟುಗಳು ನಗರಕ್ಕೆ ಆಗಮಿಸಿದ್ದಾರೆ.
ಕರ್ನಾಟಕ ಕುಸ್ತಿ ಸಂಸ್ಥೆಯ (ಕೆಡಬ್ಲ್ಯುಎ) ಅಧ್ಯಕ್ಷ ಹಾಗೂ ಭಾರತ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿಗಳಾಗಿರುವ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರ ನಾಯಕತ್ವದಲ್ಲಿ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ಅಂತರ್ ರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕುಸ್ತಿಪಟುಗಳು ಸ್ಪರ್ಧಿಸಲಿದ್ದಾರೆ.
ಒಟ್ಟು 24 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕುಸ್ತಿಪಟುಗಳು ಈ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲಿದ್ದು, ಹರ್ಯಾಣ ರಾಜ್ಯದಿಂದ ಅತೀ ಹೆಚ್ಚು 28 ಕುಸ್ತಿಪಟುಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಜಮ್ಮು-ಕಾಶ್ಮೀರ, ಆಂಧ್ರಪ್ರದೇಶ, ಚಂಡಿಗಡ, ದಿಲ್ಲಿ, ಛತ್ತೀಸ್ ಗಡ, ಗುಜರಾತ್, ಹಿಮಾಚಲ ಪ್ರದೇಶ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ ಒಟ್ಟು 700 ಕುಸ್ತಿಪಟುಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಆತಿಥೇಯ ಕರ್ನಾಟಕ ತಂಡ ಗ್ರೀಕೋ ರೋಮನ್, ಫ್ರೀಸ್ಟೈಲ್ ಮತ್ತು ಮಹಿಳಾ ಸ್ಪರ್ಧೆಗಳು ಸೇರಿದಂತೆ ಬಲಿಷ್ಠ 32 ಕುಸ್ತಿಪಟುಗಳೊಂದಿಗೆ ಚಾಂಪಿಯನ್ಶಿಪ್ಗೆ ಎಂಟ್ರಿ ಕೊಟ್ಟಿದೆ. ಕರ್ನಾಟಕ ತಂಡವನ್ನು ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾದ ಗೋಪಾಲ್ ಕೋಲಿ, ಮಹೇಶ್ ಪಿ. ಗೌಡ ಹಾಗೂ ಶ್ವೇತಾ ಸಂಜು ಅಣ್ಣಿಕೇರಿ ಮುನ್ನಡೆಸಲಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ, ಈ ವರ್ಷದ ಆರಂಭದಲ್ಲಿ ಜೋರ್ಡನ್ನಲ್ಲಿ ನಡೆದ 23ರ ವಯೋಮಿತಿಯ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿರುವ ಮಣಿಪುರದ ಕುಸ್ತಿಪಟು ವೈ.ಮೀನಾಕ್ಷಿ ದೇವಿ ಅವರು ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಈ ವರ್ಷ ನಡೆದ ಕಿರಿಯ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದ ಜ್ಯೋತಿ(53 ಕೆಜಿ ವಿಭಾಗ), ಟೂರ್ನಿಯಲ್ಲಿ ಗಮನ ಸೆಳೆದಿರುವ ಮತ್ತೊಬ್ಬ ಕುಸ್ತಿಪಟುವಾಗಿದ್ದಾರೆ.
ಪುರುಷರ ವಿಭಾಗದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಏಶ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ, ಹರ್ಯಾಣದ ಸುನೀಲ್ ದಬಾರ್ಪುರ್ಯ 87 ಕೆಜಿ ಗ್ರೀಕೋ ರೋಮನ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಕೆನಡಾದಲ್ಲಿ 2023ರಲ್ಲಿ ನಡೆದ ವಿಶ್ವ ಪೊಲೀಸ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಹರ್ಯಾಣದವರೇ ಆದ ಸನ್ನಿ 63 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಹಿರಿಯರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದ ಹರ್ಯಾಣದ ಅನುಜ್ ಕುಮಾರ್ 70 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.
ಜನಪ್ರಿಯ ಸಂಗೀತ ಸಂಯೋಜಕ ಡಾ.ಗುರುಕಿರಣ್ ಅವರು ಪ್ರತಿಷ್ಠಿತ ಪಂದ್ಯಾವಳಿಗಾಗಿ ವಿಶೇಷ ಗೀತೆಯನ್ನು ರಚಿಸುವ ಮೂಲಕ ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ಗೆ ತಮ್ಮ ಅಪ್ರತಿಮ ಬೆಂಬಲವನ್ನು ನೀಡಿದ್ದಾರೆ.
ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.
ದೇಶದ ಬೇರೆ ಬೇರೆ ಕಡೆಗಳಿಂದ ಆಗಮಿಸಿರುವ ಕುಸ್ತಿಪಟುಗಳಿಗೆ ನಾವು ಆತ್ಮೀಯ ಸ್ವಾಗತವನ್ನು ಕೋರುತ್ತೇವೆ. ಕುಸ್ತಿಪಟುಗಳು ಸ್ಪರ್ಧಿಸಲು ಮತ್ತು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪೂರಕವಾಗಿ ಕೆಡಬ್ಲ್ಯುಎ ತಂಡ ಕಳೆದ ಕೆಲ ವಾರಗಳಿಂದ ದಣಿವರಿಯದೆ ಕೆಲಸ ಮಾಡಿದೆ. ಅಷ್ಟೇ ಅಲ್ಲದೆ, ನಮ್ಮ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು ನಾವು ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ಸ್ಪರ್ಧಿಗಳು ನಮ್ಮ ರಾಜ್ಯದ ಆತಿಥ್ಯವನ್ನು ಆನಂದಿಸಲಿದ್ದಾರೆ ಎಂದು ಭಾವಿಸುತ್ತೇನೆ ಮತ್ತು ಅವರೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ.
ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಕರ್ನಾಟಕ ಕುಸ್ತಿ ಸಂಸ್ಥೆಯ ಅಧ್ಯಕ್ಷ







