Munich World Cup| 22 ಸದಸ್ಯರ ತಂಡವನ್ನು ಪ್ರಕಟಿಸಿದ NRAI

ಮನು ಭಾಕರ್ | Photo Credit : thehindu
ಹೊಸದಿಲ್ಲಿ, ಮೇ 24: ಮ್ಯೂನಿಕ್ನಲ್ಲಿ ಮೇ 26ರಿಂದ 31ರ ತನಕ ನಡೆಯಲಿರುವ ಐಎಸ್ಎಸ್ಎಫ್ ರೈಫಲ್/ಪಿಸ್ತೂಲ್ ವರ್ಲ್ಡ್ ಕಪ್ಗಾಗಿ ಭಾರತ ತಂಡವು 22 ಸದಸ್ಯರನ್ನು ಒಳಗೊಂಡ ತಂಡವನ್ನು ಕಣಕ್ಕಿಳಿಸಿದೆ. ಒಲಿಂಪಿಕ್ಸ್ನಲ್ಲಿ ಅವಳಿ ಪದಕ ವಿಜೇತೆ ಮನು ಭಾಕರ್ ಮಿಕ್ಸೆಡ್ ಟೀಮ್ ಸ್ಪರ್ಧಾವಳಿಯಲ್ಲದೆ, ಎರಡು ವೈಯಕ್ತಿಕ ಪಿಸ್ತೂಲ್ ಸ್ಪರ್ಧೆಗಳಲ್ಲೂ ಭಾಗವಹಿಸಲಿದ್ದಾರೆ.
ಭಾರತದ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್(ಎನ್ಆರ್ಎಐ)ರವಿವಾರ ಅನುಭವಿ ಹಾಗೂ ಯುವ ಶೂಟರ್ಗಳನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ.
ಮನು ಭಾಕರ್ ಅವರೊಂದಿಗೆ ಒಲಿಂಪಿಯನ್ ಹಾಗೂ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಪದಕ ವಿಜೇತೆ ಇಶಾ ಸಿಂಗ್ ಅವರು ಕೂಡ ಎರಡು ವೈಯಕ್ತಿಕ ಪಿಸ್ತೂಲ್ ಇವೆಂಟ್ಗಳಲ್ಲಿ ಭಾಗವಹಿಸಲಿದ್ದಾರೆ. ಭಾರತದ ಪ್ರಮುಖ ಶೂಟರ್ಗಳು ಈ ಋತುವಿನಲ್ಲಿ ಮೊದಲ ಬಾರಿ ವಿದೇಶದಲ್ಲಿ ಉನ್ನತ ಮಟ್ಟದ ಇಂಟರ್ನ್ಯಾಶನಲ್ ಸ್ಪರ್ಧಾವಳಿಗೆ ವಾಪಸಾಗಲಿದ್ದಾರೆ.
ಸ್ಪರ್ಧಾವಳಿಯು ಮೇ 26ರಿಂದ ಮಹಿಳೆಯರ 25 ಮೀ. ಪಿಸ್ತೂಲ್ ಪ್ರೆಸಿಶನ್ ಸ್ಟೇಜ್ನ ಮೂಲಕ ಆರಂಭವಾಗಲಿದೆ. ಪುರುಷರ 10 ಮೀ. ಏರ್ ಪಿಸ್ತೂಲ್ ಹಾಗೂ ಮಹಿಳೆಯರ 50 ಮೀ. ರೈಫಲ್-3 ಪೊಸಿಶನ್ಸ್ನ ಎಲಿಮಿನೇಶನ್ ಸುತ್ತು ಮೊದಲ ದಿನ ನಡೆಯಲಿದೆ.
ಪುರುಷರ 10 ಮೀ.ಏರ್ ಪಿಸ್ತೂಲ್ ಹಾಗೂ ಪುರುಷರ 10 ಮೀ.ಏರ್ ರೈಫಲ್ನ ಮೊದಲ ಫೈನಲ್ ಪಂದ್ಯಗಳು ಮೊದಲ ದಿನವೇ ನಿಗದಿಯಾಗಿದೆ.
ಹಲವಾರು ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ಗಳ ಸಹಿತ 80 ದೇಶಗಳ ಒಟ್ಟು 696 ಶೂಟರ್ಗಳು ಮ್ಯೂನಿಕ್ ವರ್ಲ್ಡ್ ಕಪ್ನಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ವರ್ಲ್ಡ್ ಚಾಂಪಿಯನ್ಶಿಪ್ ಹಗೂ ಇತರ ಬಹು ಕ್ರೀಡಾ ಸ್ಪರ್ಧಾವಳಿಗಳಿಗೆ ಮ್ಯೂನಿಕ್ ವರ್ಲ್ಡ್ ಕಪ್ ಪ್ರಮುಖ ಪೂರ್ವ ತಯಾರಿಯಾಗಿದೆ.
ಎಪ್ರಿಲ್ನಲ್ಲಿ ನಡೆದಿದ್ದ ವರ್ಷದ ಮೊದಲ ರೈಫಲ್/ಪಿಸ್ತೂಲ್ ವರ್ಲ್ಡ್ ಕಪ್ನಲ್ಲಿ ಭಾರತವು ಒಂದು ಚಿನ್ನದ ಪದಕ ಜಯಿಸಿತ್ತು.






