ಔಪಚಾರಿಕ ಪಂದ್ಯಕ್ಕೆ ರೋಚಕತೆ ತಂದ ಒಮಾನ್!

PC: PTI
ಅಬುಧಾಬಿ: ಭಾನುವಾರ ನಡೆಯುವ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್4 ಪಂದ್ಯಕ್ಕೆ ಅಭ್ಯಾಸ ಪಂದ್ಯ ಎಂದು ಪರಿಗಣಿಸಲಾಗಿದ್ದ ಔಪಚಾರಿಕ ಪಂದ್ಯದಲ್ಲಿ ಭಾರತ ವಿರುದ್ಧ 21 ರನ್ ಅಂತರದಿಂದ ಸೋಲುವ ಮುನ್ನ ಒಮಾನ್ ದಿಟ್ಟ ಹೋರಾಟ ಪ್ರದರ್ಶಿಸಿತು.
ಶೈಖ್ ಝಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಎದುರಾಳಿಗಳ ದಿಟ್ಟ ಹೋರಾಟವನ್ನು ಆತಂಕದಿಂದ ವೀಕ್ಷಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಅಬುಧಾಬಿಯ ನಿಧಾನಗತಿಯ ಪಿಚ್ ನಲ್ಲಿ ಮೊದಲು ಬ್ಯಾಟ್ ಮಾಡಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದ ಭಾರತ ಹಲವು ಆತಂಕದ ಕ್ಷಣಗಳನ್ನು ಎದುರಿಸಿ ಅಂತಿಮವಾಗಿ ಎದುರಾಳಿಗಳನ್ನು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದ ಹಿನ್ನೆಲೆಯಲ್ಲಿ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅವರು ಭಾರತದ ಮಧ್ಯಮ ಕ್ರಮಾಂಕದಲ್ಲಿ ಸ್ಥಿತಿಸ್ಥಾಪಕತ್ವ ಅಗತ್ಯ ಎಂದು ಪ್ರತಿಪಾದಿಸಿದ್ದರು. ಆರಂಭಿಕ ಜೋಡಿಯಾದ ಅಭಿಷೇಕ್ ಶರ್ಮಾ ಮತ್ತು ಗಿಲ್ ಅವರಿಂದಾಚೆಗೆ ಉಳಿದ ಬ್ಯಾಟ್ಸ್ ಮನ್ ಗಳು ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ಆಡುವಂತೆ ಸೂಚಿಸಿದ್ದರು.
ಶುಕ್ರವಾರದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕವನ್ನು ಬದಲಿಸಲಾಗಿದ್ದು, ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದು ನಾಯಕ ಎಸ್ ಕೆವೈ ಕೆಳ ಕ್ರಮಾಂಕಕ್ಕೆ ಸರಿದಿದ್ದರು. ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಮತ್ತು ಕುಲದೀಪ್ ಯಾದವ್ ಕೂಡಾ ಬಡ್ತಿ ಪಡೆದು ಭಾರತದ ನಾಯಕ 11ನೇ ಕ್ರಮಾಂಕದಲ್ಲಿ ಆಡಲು ಇಳಿದರು. ಬೂಮ್ರಾ ಮತ್ತು ವರುಣ್ ಚಕ್ರವರ್ತಿಯವರಿಗೆ ವಿಶ್ರಾಂತಿ ನೀಡಿದ ಭಾರತ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾಗೆ ಅವಕಾಶ ನೀಡಿತ್ತು.
ಒಮಾನ್ ನ ಎಡಗೈ ವೇಗಿ ಶಾ ಫೈಸೆಲ್ ತಮ್ಮ ಕನಸಿನ ಎಸೆತದಿಂದ ಗಿಲ್ ಅವರಿಗೆ ಅಚ್ಚರಿ ಮೂಡಿಸಿ ಮೇಡನ್ ವಿಕೆಟ್ ಪಡೆದರು. ಭಾರತದ ವಿರುದ್ಧ ಮೊದಲ ಆರು ಓವರ್ ಗಳಲ್ಲಿ ಯಾವುದೇ ಆಟಗಾರ ಸಾಧಿಸಿದ ಮೊದಲ ಮೇಡನ್ ಓವರ್ ಇದಾಗಿದೆ. ಅಂತೆಯೇ ಆರಂಭಿಕ ಆಟಗಾರರಾದ ಜಿತೇಂದರ್ ಸಿಂಗ್ (32) ಹಾಗೂ ಆಮೀರ್ ಕಲೀಂ (64) ಮೊದಲ ವಿಕೆಟ್ ಗೆ 50 ರನ್ ಕಲೆ ಹಾಕಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಭಾರತದ ವಿರುದ್ಧ ಕಳೆದ 14 ಪಂದ್ಯಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಪವರ್ ಪ್ಲೇ ಮುಗಿಸಿದ ಮೊದಲ ತಂಡವಾಗಿಯೂ ಒಮಾನ್ ದಾಖಲೆ ಸೃಷ್ಟಿಸಿತು.







