2ನೇ ಇನಿಂಗ್ಸ್ನಲ್ಲಿ ಬಾಂಗ್ಲಾ ಬೌಲರ್ಗಳ ದಾಳಿಗೆ ತತ್ತರಿಸಿದ ಪಾಕ್ ಬ್ಯಾಟರ್ಗಳು
ಐತಿಹಾಸಿಕ ಸರಣಿ ವಿಜಯದತ್ತ ಬಾಂಗ್ಲಾದೇಶ

PC : PTI
ರಾವಲ್ಪಿಂಡಿ : ಪ್ರವಾಸಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯನ್ನು ಐತಿಹಾಸಿಕ 2-0 ಅಂತರದಿಂದ ಕ್ಲೀನ್ಸ್ವೀಪ್ ಮಾಡುವುದಕ್ಕೆ ಸಿದ್ಧವಾಗಿದೆ. ಬಾಂಗ್ಲಾದೇಶವು ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ನ ನಾಲ್ಕನೇ ದಿನವಾದ ಸೋಮವಾರ ಆತಿಥೇಯ ತಂಡದ ಎರಡನೇ ಇನಿಂಗ್ಸನ್ನು ಕೇವಲ 172 ರನ್ಗಳಿಗೆ ನಿಯಂತ್ರಿಸಿದೆ. ಪಂದ್ಯವನ್ನು ಗೆಲ್ಲಲು ಎರಡನೇ ಇನಿಂಗ್ಸ್ನಲ್ಲಿ 185 ರನ್ಗಳ ಗುರಿಯನ್ನು ಪಡೆದ ಬಾಂಗ್ಲಾದೇಶವು ಮಂದ ಬೆಳಕು ಮತ್ತು ಮಳೆಯಿಂದಾಗಿ ದಿನದಾಟ ಮುಗಿಯುವ ಮುನ್ನ ಯಾವುದೇ ವಿಕೆಟ್ ಕಳೆದುಕೊಳ್ಳದೆ 42 ರನ್ಗಳನ್ನು ಗಳಿಸಿದೆ.
ಝಕೀರ್ ಹಸನ್ ಎರಡು ಸಿಕ್ಸರ್ಗಳನ್ನು ಒಳಗೊಂಡ 31 ರನ್ಗಳು ಮತ್ತು ಶದ್ಮಾನ್ ಇಸ್ಲಾಮ್ 9 ರನ್ಗಳೊಂದಿಗೆ ಕ್ರೀಸ್ನಲ್ಲಿದ್ದಾರೆ.
ಪಂದ್ಯ ಗೆಲ್ಲಲು ಬಾಂಗ್ಲಾದೇಶಕ್ಕೆ ಕೊನೆಯ ದಿನ 143 ರನ್ಗಳನ್ನು ಗಳಿಸಬೇಕಾಗಿದೆ.
ಇದಕ್ಕೂ ಮೊದಲು, ಪಾಕಿಸ್ತಾನವು ತನ್ನ ದ್ವಿತೀಯ ಇನಿಂಗ್ಸನ್ನು ಎರಡು ವಿಕೆಟ್ಗಳ ನಷ್ಟಕ್ಕೆ 9 ರನ್ ಇದ್ದಲ್ಲಿಂದ ಮುಂದುವರಿಸಿತು. ಆದರೆ, ಬಾಂಗ್ಲಾದೇಶ ಬೌಲರ್ಗಳ ಉರಿ ದಾಳಿಯನ್ನು ಎದುರಿಸಿ ನಿಲ್ಲಲು ಪಾಕಿಸ್ತಾನಿ ಬ್ಯಾಟರ್ಗಳಿಗೆ ಸಾಧ್ಯವಾಗಲಿಲ್ಲ. ಬಾಂಗ್ಲಾದೇಶದ ಬೌಲರ್ಗಳಾದ ಹಸನ್ ಮಹ್ಮೂದ್ (43 ರನ್ಗಳನ್ನು ನೀಡಿ 5 ವಿಕೆಟ್) ಮತ್ತು ನಹೀದ್ ರಾಣಾ (44 ರನ್ಗಳನ್ನು ನೀಡಿ 4 ವಿಕೆಟ್) ಪಾಕಿಸ್ತಾನಿ ಬ್ಯಾಟಿಂಗ್ ಸರದಿಯನ್ನು ಧ್ವಂಸಗೊಳಿಸಿದರು.
ಸಲೀಮ್ ಅಯೂಬ್ 20 ರನ್ಗಳ ದೇಣಿಗೆಯನ್ನು ನೀಡಿದರು. ನಾಯಕ ಶಾನ್ ಮಸೂದ್ 28 ರನ್ಗಳನ್ನು ಗಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಮುಹಮ್ಮದ್ ರಿಝ್ವಾನ್ (43) ಮತ್ತು ಸಲ್ಮಾನ್ ಆಘ (47 ಅಜೇಯ) ತಂಡಕ್ಕೆ ಕೊಂಚ ಆಸರೆ ನೀಡಿದರು.
ಮೊದಲ ಟೆಸ್ಟ್ನಲ್ಲಿ ಬಾಂಗ್ಲಾದೇಶವು ಪಾಕಿಸ್ತಾನವನ್ನು 10 ವಿಕೆಟ್ಗಳಿಂದ ಸೋಲಿಸಿತ್ತು. ಅದು ಪಾಕಿಸ್ತಾನ ವಿರುದ್ಧದ ಬಾಂಗ್ಲಾದೇಶದ ಮೊದಲ ಟೆಸ್ಟ್ ವಿಜಯವಾಗಿತ್ತು.







