ಎಸ್ಎಎಎಫ್ ಜೂನಿಯರ್ ಚಾಂಪಿಯನ್ಶಿಪ್ | ಭಾರತಕ್ಕೆ ಪಾಕ್ ತಂಡದ ಆಗಮನ

PC : X/@afiindia
ಹೊಸದಿಲ್ಲಿ : ವೀಸಾ ನೀಡಿಕೆಯಲ್ಲಿ ಆಗಿರುವ ವಿಳಂಬದ ಬಳಿಕ, ಪಾಕಿಸ್ತಾನದ 12 ಸದಸ್ಯರ ಜೂನಿಯರ್ ಅತ್ಲೆಟಿಕ್ಸ್ ತಂಡವು ದಕ್ಷಿಣ ಏಶ್ಯ ಅತ್ಲೆಟಿಕ್ಸ್ ಫೆಡರೇಶನ್ (ಎಸ್ಎಎಎಫ್) ಜೂನಿಯರ್ ಚಾಂಪಿಯನ್ಶಿಪ್ಸ್ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದೆ.
ಪಂದ್ಯಾವಳಿಯು ಚೆನ್ನೈಯಲ್ಲಿ ಸೆಪ್ಟಂಬರ್ 11ರಿಂದ 13ರವರೆಗೆ ನಡೆಯಲಿದೆ.
ಅತ್ಲೀಟ್ಗಳು ಮತ್ತು ಅವರ ಜೊತೆಗೆ ಹೋಗುವ ಅಧಿಕಾರಿಗಳಿಗೆ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಶನ್ ಶನಿವಾರ ವೀಸಾ ನೀಡಿತು ಎಂದು ಪಾಕಿಸ್ತಾನ ಅತ್ಲೆಟಿಕ್ಸ್ ತಂಡದ ಅಧಿಕಾರಿಯೊಬ್ಬರು ತಿಳಿಸಿದರು. ಹಾಗಾಗಿ, ಅತ್ಲೀಟ್ಗಳು ಮತ್ತು ಅಧಿಕಾರಿಗಳು ಸೋಮವಾರ ಭಾರತಕ್ಕೆ ಪ್ರಯಾಣಿಸಿದ್ದಾರೆ.
‘‘ಪಾಕಿಸ್ತಾನಿ ತಂಡವು ವಾಘಾ ಗಡಿ ಮೂಲಕ ಭಾರತಕ್ಕೆ ಪ್ರಯಾಣಿಸಿತು. ವಾಘಾ ಗಡಿಯಿಂದ ಅವರು ಅಮೃತಸರಕ್ಕೆ ಹೋಗಲಿದ್ದಾರೆ ಮತ್ತು ಅಲ್ಲಿಂದ ಅವರು ಚೆನ್ನೈಗೆ ವಿಮಾನದ ಮೂಲಕ ಪ್ರಯಾಣಿಸಲಿದ್ದಾರೆ’’ ಎಂದು ಅಧಿಕಾರಿ ತಿಳಿಸಿದರು.
ಪಾಕಿಸ್ತಾನಿ ತಂಡವು ಆಗಮಿಸಿರುವುದನ್ನು ಎಸ್ಎಎಎಫ್ ಜೂನಿಯರ್ ಚಾಂಪಿಯನ್ಶಿಪ್ಸ್ನ ಸಂಘಟಕ ಅತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಖಚಿತಪಡಿಸಿದೆ.
ತಂಡವು ವಾಘಾ ಗಡಿಯಲ್ಲಿ ಇರುವ ಚಿತ್ರವನ್ನು ಎಎಫ್ಐ ‘ಎಕ್ಸ್’ ನಲ್ಲಿ ಹಂಚಿಕೊಂಡಿದೆ ಮತ್ತು ಮುಂಬರುವ ಪಂದ್ಯಾವಳಿಯಲ್ಲಿ ಪಾಕಿಸ್ತಾನಿ ತಂಡವು ಭಾಗವಹಿಸುವುದನ್ನು ಖಚಿತಪಡಿಸಿದೆ.
‘‘ಪಾಕಿಸ್ತಾನಿ ಜೂನಿಯರ್ ಅತ್ಲೀಟ್ಗಳು ಮತ್ತು ಅಧಿಕಾರಿಗಳು ಇಂದು ಅಮೃತಸರದಲ್ಲಿರುವ ವಾಘಾ ಗಡಿಗೆ ಆಗಮಿಸಿದ್ದಾರೆ. ಚೆನ್ನೈಯಲ್ಲಿ ಸೆಪ್ಟಂಬರ್ 11ರಂದು ಆರಂಭಗೊಳ್ಳಲಿರುವ ಎಸ್ಎಎಎಫ್ ಜೂನಿಯರ್ ಚಾಂಪಿಯನ್ಶಿಪ್ಸ್ನಲ್ಲಿ ಪಾಕಿಸ್ತಾನದ ಅತ್ಲೀಟ್ಗಳು ಸ್ಪರ್ಧಿಸಲಿದ್ದಾರೆ’’ ಎಂದು ಎಎಫ್ಐ ತಿಳಿಸಿದೆ.







