ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಭರ್ಜರಿ ಜಯ: ಭಾರತ- ಪಾಕ್ ಫೈನಲ್ ಸಾಧ್ಯತೆ

PC: x.com/AJE_Sport
ಹೊಸದಿಲ್ಲಿ: ಏಷ್ಯಾ ಕಪ್ ಟೂರ್ನಿಯಲ್ಲಿ ಕೊನೆಯ ನಾಲ್ಕು ಪಂದ್ಯಗಳು ಮಾತ್ರ ಉಳಿದಿದ್ದು, ಭಾನುವಾರ ನಡೆಯುವ ಫೈನಲ್ ಅವಕಾಶಗಳು ಸೂಪರ್-4 ತಲುಪಿದ ಎಲ್ಲ ತಂಡಗಳಿಗೆ ಇನ್ನೂ ಮುಕ್ತವಾಗಿಯೇ ಇದೆ.
ಭಾರತ ಹಾಗೂ ಬಾಂಗ್ಲಾದೇಶ ಸೂಪರ್-4 ಹಂತದಲ್ಲಿ ಗೆಲುವಿನ ಆರಂಭ ಪಡೆದಿದ್ದರು. ಮಂಗಳವಾರ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ಫೈನಲ್ ತಲುಪುವ ಆಸೆಯನ್ನು ಜೀವಂತ ಇರಿಸಿಕೊಂಡಿದೆ. ಇದರಿಂದಾಗಿ ಟೂರ್ನಿಯ ಫೈನಲ್ನಲ್ಲಿ ಮತ್ತೆ ಏಷ್ಯಾದ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಸೂಪರ್4 ಹಂತದ ಮೊದಲ ಪಂದ್ಯ ಸೋತಿದ್ದ ಪಾಕಿಸ್ತಾನ ಹಾಗೂ ಶ್ರೀಲಂಕಾಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಶ್ರೀಲಂಕಾವನ್ನು ಅಲ್ಪಮೊತ್ತಕ್ಕೆ (133/8) ನಿಯಂತ್ರಿಸುವಲ್ಲಿ ಪಾಕಿಸ್ತಾನದ ಬೌಲರ್ಗಳು ಪ್ರಮುಖ ಪಾತ್ರ ವಹಿಸಿದರು. ಪಾಕಿಸ್ತಾನದ ಆರಂಭಿಕ ಜೋಡಿ 45 ರನ್ ಕಲೆ ಹಾಕಿದ ಹೊರತಾಗಿಯೂ ಒಂದು ಹಂತದಲ್ಲಿ 80 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಆತಂಕದ ಕ್ಷಣಗಳನ್ನು ಎದುರಿಸಿತು. ಆದರೆ ಮೊಹ್ಮದ್ ನವಾಝ್ (24 ಎಸೆತಗಳಲ್ಲಿ ನಾಟೌಟ್ 38) ಹಾಗೂ ಹುಸೈನ್ ತಲತ್ (ನಾಟೌಟ್ 32) ಮುರಿಯದ ಆರನೇ ವಿಕೆಟ್ಗೆ 58 ರನ್ ಸೇರಿಸಿ 12 ಎಸೆತಗಳು ಇರುವಂತೆಯೇ ಗೆಲುವು ತಂದುಕೊಟ್ಟರು.
ಇದೀಗ ಪಾಕಿಸ್ತಾನ ಎರಡು ಅಂಕಗಳೊಂದಿಗೆ ಭಾರತ ಹಾಗೂ ಬಾಂಗ್ಲಾದೇಶದಷ್ಟೇ ಅಂಕ ಹೊಂದಿದೆ. ನಿವ್ವಳ ರನ್ ರೇಟ್ ಆಧಾರದಲ್ಲಿ ಭಾರತ (+0.689) ಬಳಿಕ ಪಾಕಿಸ್ತಾನ (+0.226) ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ (+0.121) ಮೂರನೇ ಸ್ಥಾನದಲ್ಲಿದ್ದು, ಶ್ರೀಲಂಕಾ ನಿರ್ಗಮಿಸುವ ಹಂತದಲ್ಲಿದೆ.
ಬುಧವಾರ ದುಬೈನಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ ಶ್ರೀಲಂಕಾ ಟೂರ್ನಿಯಿಂದ ಹೊರಬೀಳುತ್ತದೆ ಹಾಗೂ ಭಾರತ ಫೈನಲ್ ಪ್ರವೇಶಿಸುತ್ತದೆ. ಆಗ ಗುರುವಾರ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ ಅಕ್ಷರಶಃ ಸೆಮಿಫೈನಲ್ ಆಗಿ ಮಾರ್ಪಡುತ್ತದೆ. ಗೆದ್ದ ತಂಡ ಫೈನಲ್ ತಲುಪುತ್ತದೆ.
ಒಂದು ವೇಳೆ ಬಾಂಗ್ಲಾದೇಶ ಭಾರತದ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದರೆ ಫೈನಲ್ ಅವಕಾಶ ಎಲ್ಲ ತಂಡಗಳಿಗೂ ಮುಕ್ತವಾಗಿ ಉಳಿಯುತ್ತದೆ. ಆಗ ಭಾರತ ಹಾಗೂ ಪಾಕಿಸ್ತಾನ ಉಭಯ ತಂಡಗಳು ತಮ್ಮ ಕೊನೆಯ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದಾದಲ್ಲಿ ಬಾಂಗ್ಲಾದೇಶ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೂ ಫೈನಲ್ ಟಿಕೆಟ್ ಖಾತರಿ ಇಲ್ಲ. ಭಾರತ ತಂಡ ಶ್ರೀಲಂಕಾ ವಿರುದ್ಧ ಜಯ ಸಾಧಿಸಿ, ಪಾಕಿಸ್ತಾನ ತಂಡ ಬಾಂಗ್ಲಾ ವಿರುದ್ಧ ಗೆದ್ದಲ್ಲಿ ಮೂರೂ ತಂಡಗಳು ತಲಾ ನಾಲ್ಕು ಅಂಕ ಪಡೆಯುತ್ತವೆ ಹಾಗೂ ನಿವ್ವಳ ರನ್ರೇಟ್ ಆಧಾರದಲ್ಲಿ ಅಗ್ರ ಎರಡು ತಂಡಗಳು ಫೈನಲ್ ತಲುಪುತ್ತವೆ.







