ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ | ಮನ್ದೀಪ್ ಕೌರ್, ಪಾಲಕ್ ಕೊಹ್ಲಿ ಹೋರಾಟ ಅಂತ್ಯ

ಪಾಲಕ್ ಕೊಹ್ಲಿ| Photo Credit: X/@ddsportschannel
ಪ್ಯಾರಿಸ್ : ಭಾರತೀಯ ಶಟ್ಲರ್ಗಳಾದ ಮನ್ದೀಪ್ ಕೌರ್ ಹಾಗೂ ಪಾಲಕ್ ಕೊಹ್ಲಿ ರವಿವಾರ ಮಹಿಲೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲುವುದರೊಂದಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಿಂದ ನಿರ್ಗಮಿಸಿದ್ದಾರೆ.
ಎಸ್ಎಲ್3 ವಿಭಾಗದಲ್ಲಿ ಸ್ಪರ್ಧಿಸಿದ ಮನ್ದೀಪ್ 23 ನಿಮಿಷಗಳಲ್ಲಿ ನೈಜೀರಿಯದ ಬೊಲಾಜಿ ಮರಿಯಮ್ ವಿರುದ್ಧ 8-21, 9-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ. ಮನ್ದೀಪ್ 3ನೇ ಶ್ರೇಯಾಂಕದ ಮರಿಯಮ್ ವಿರುದ್ಧ ಸತತ ಎರಡನೇ ಬಾರಿ ಸೋಲುಂಡಿದ್ದಾರೆ. ಗ್ರೂಪ್ ಹಂತದಲ್ಲೂ ನೈಜೀರಿಯದ ಆಟಗಾರ್ತಿಯ ವಿರುದ್ಧ ಸೋತಿದ್ದಾರೆ.
ಎಸ್ಎಲ್4 ವಿಭಾಗದಲ್ಲಿ ಪ್ಯಾರಾ ವರ್ಲ್ಡ್ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ವಿಜೇತೆ ಪಾಲಕ್ ಅವರು 28 ನಿಮಿಷಗಳಲ್ಲಿ ಅಂತ್ಯಗೊಂಡ ಅಂತಿಮ-8ರ ಪಂದ್ಯದಲ್ಲಿ ಇಂಡೋನೇಶ್ಯದ ಖಲಿಮಾಟುಸ್ ಸದಿಯಾ ವಿರುದ್ಧ 19-21, 15-21 ಗೇಮ್ ಗಳ ಅಂತರದಿಂದ ಶರಣಾಗಿದ್ದಾರೆ.
►ನಿತ್ಯಾಶ್ರೀ , ಮನಿಶಾ ಸೆಮಿ ಫೈನಲ್ ಗೆ
ಅಗ್ರ ಶ್ರೇಯಾಂಕಿತೆ ನಿತ್ಯಾಶ್ರೀ ಶಿವನ್ ಪ್ಯಾರಾಲಿಂಪಿಕ್ಸ್ ನಲ್ಲಿ ಮಹಿಳೆಯರ ಸಿಂಗಲ್ಸ್ ಎಸ್ಎಚ್6 ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಪೋಲ್ಯಾಂಡ್ ನ ಒಲಿವಿಯಾ ವಿರುದ್ದ 2-0 ಅಂತರದಿಂದ ಜಯ ಸಾಧಿಸಿದರು.
ರವಿವಾರ ನಡೆದ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ನಿತ್ಯಾ ಶ್ರೀ ಅವರು 21-4, 21-7 ಅಂತರದಿಂದ ಜಯಶಾಲಿಯಾಗಿ ಸೆಮಿ ಫೈನಲ್ ಗೆ ತಲುಪಿದರು. ಸೆಮಿ ಫೈನಲ್ ನಲ್ಲಿ ಚೀನಾದ ಶುಯಾಂಗ್ಬೊ ಲಿನ್ ರನ್ನು ಎದುರಿಸಲಿದ್ದಾರೆ.
ಇದೇ ವೇಳೆ ಮಹಿಳೆಯರ ಸಿಂಗಲ್ಸ್ ಎಸ್ಯು ಕ್ವಾರ್ಟರ್ ಫೈನಲ್ ನಲ್ಲಿ ಮನಿಶಾ ರಾಮ್ದಾಸ್ ಅವರು ಜಪಾನ್ ನ ಮಾಮಿಕೊ ಟೊಯೊಡಾರನ್ನು 21-13, 21-16 ಗೇಮ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸೆಮಿ ಫೈನಲ್ ಗೆ ಪ್ರವೇಶಿಸಿದರು.







