ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ | ನಿತೇಶ್ ಕುಮಾರ್, ಸುಕಾಂತ್ ಕದಮ್ ಸೆಮಿ ಫೈನಲ್ಗೆ

ನಿತೇಶ್ ಕುಮಾರ್, ಸುಕಾಂತ್ ಕದಮ್ | PC ; X
ಪ್ಯಾರಿಸ್ : ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ನಿತೇಶ್ ಕುಮಾರ್ ಹಾಗೂ ಸುಕಾಂತ್ ಕದಮ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಶನಿವಾರ ತಮ್ಮ ಕೊನೆಯ ಗ್ರೂಪ್ ಪಂದ್ಯಗಳಲ್ಲಿ ನೇರ ಗೇಮ್ಗಳ ಅಂತರದಿಂದ ಜಯ ಸಾಧಿಸಿದ ನಂತರ ಕ್ರಮವಾಗಿ ಪುರುಷರ ಸಿಂಗಲ್ಸ್ ಎಸ್ಎಲ್3 ಹಾಗೂ ಎಸ್ಎಲ್4ನಲ್ಲಿ ಸೆಮಿ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಕಳೆದ ವರ್ಷ ಚೀನಾದಲ್ಲಿ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ನಿತೇಶ್ ಶನಿವಾರ ಥಾಯ್ಲೆಂಡ್ನ ಮೊಂಗ್ಖೊನ್ ಬನ್ಸನ್ ವಿರುದ್ಧ 21-13 21-14 ಅಂತರದಿಂದ ಜಯ ಸಾಧಿಸಿದರು.ಈ ಮೂಲಕ ಸತತ ಮೂರನೇ ಗೆಲುವು ದಾಖಲಿಸಿ ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರು. ಎ ಗುಂಪಿನಲ್ಲಿ 2ನೇ ಸ್ಥಾನ ಪಡೆದಿರುವ ಬನ್ಸನ್ ಕೂಡ ಸೆಮಿ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಎ ಗುಂಪಿನಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತ, ಈಗಾಗಲೇ ಟೂರ್ನಮೆಂಟ್ನಿಂದ ಹೊರಗುಳಿದಿರುವ ಮನೋಜ್ ಸರ್ಕಾರ್ ಚೀನಾದ ಯಾಂಗ್ ಜಿಯಾನ್ರನ್ನು 21-11, 21-11 ಅಂತರದಿಂದ ಸೋಲಿಸಿದರು.
ಪುರುಷರ ಸಿಂಗಲ್ಸ್ ಎಸ್ಎಲ್4 ಕ್ಲಾಸ್ನಲ್ಲಿ ಥಾಯ್ಲೆಂಡ್ನ ಟೀಮಾರೊಮ್ ಸಿರಿಪಾಂಗ್ರನ್ನು 21-12, 21-12 ಅಂತರದಿಂದ ಸೋಲಿಸಿದ ಸುಕಾಂತ್ ಕದಮ್ ಬಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರು. ಈ ಮೂಲಕ ಸೆಮಿ ಫೈನಲ್ಗೆ ಅರ್ಹತೆ ಪಡೆದು ಸಹ ಆಟಗಾರ ಸುಹಾಸ್ ಯತಿರಾಜ್ರನ್ನು ಸೇರಿಕೊಂಡರು.
ಸುಕಾಂತ್ ಮೂರು ಆಟಗಾರರನ್ನು ಒಳಗೊಂಡ ಗುಂಪಿನಲ್ಲಿ ಸತತ ಎರಡನೇ ಜಯ ದಾಖಲಿಸಿದರು. ಸುಕಾಂತ್ ಕಳೆದ ವರ್ಷ ಚೀನಾದಲ್ಲಿ ನಡೆದಿದ್ದ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಕಂಚು ಜಯಿಸಿದ್ದರು.
ಇದೇ ವೇಳೆ ಮಹಿಳೆಯರ ಸಿಂಗಲ್ಸ್ ಎಸ್ಎಲ್3 ವಿಭಾಗದ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯದ ವಿನೊಟ್ ಸೆಲಿನ್ರನ್ನು 21-23, 21-10, 21-17 ಅಂತರದಿಂದ ಮಣಿಸಿದ ಮನ್ದೀಪ್ ಕೌರ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಶುಕ್ರವಾರ ತಡರಾತ್ರಿ ನಡೆದ ಪಂದ್ಯಗಳಲ್ಲಿ ಸುಹಾಸ್ ಯತಿರಾಜ್ ಹಾಗೂ ಪಾಲಕ್ ಕೊಹ್ಲಿ ತಮ್ಮ ಆರಂಭಿಕ ಮಿಕ್ಸಡ್ ಡಬಲ್ಸ್ ಎಸ್ಎಲ್3 ಸ್ಪರ್ಧೆಯಲ್ಲಿ ಇಂಡೋನೇಶ್ಯದ ಹಿಕ್ಮತ್ ರಾಮ್ದಾನಿ ಹಾಗೂ ಲಿಯಾನಿ ಒಕ್ಟಿಲಾ ಎದುರು 11-21, 17-21 ಅಂತರದಿಂದ ಸೋತಿದ್ದಾರೆ.
ಇನ್ನೊಂದು ಎ ಗುಂಪಿನ ಮಿಕ್ಸೆಡ್ ಡಬಲ್ಸ್ ಸ್ಪರ್ಧೆಯಲ್ಲಿ ನಿತೇಶ್ ಕುಮಾರ್ ಹಾಗೂ ತುಳಸಿಮತಿ ಮುರುಗೇಶನ್ ಫ್ರೆಂಚ್ನ ಫೌಸ್ಟಿನ್ ನೊಯೆಲ್ ಹಾಗೂ ಲುಕಾಸ್ ಮಝುರ್ ಎದುರು 22-24, 19-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.







