ಪ್ಯಾರಿಸ್ ಒಲಿಂಪಿಕ್ಸ್| ಪುರುಷರ 10 ಮೀ. ಏರ್ ರೈಫಲ್ ಫೈನಲ್: ಸ್ಪಲ್ಪದರಲ್ಲೇ ಪದಕ ವಂಚಿತರಾದ ಅರ್ಜುನ್ ಬಬುಟಾ

ಅರ್ಜುನ್ ಬಬುಟಾ | PC : X
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸೋಮವಾರ ನಡೆದ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧಾವಳಿಯ ಫೈನಲ್ನಲ್ಲಿ ಪದಕ ಗೆಲ್ಲುವ ಸನಿಹಕ್ಕೆ ತಲುಪಿದ್ದ ಭಾರತೀಯ ಶೂಟರ್ ಅರ್ಜುನ್ ಬಬುಟಾ 208.4 ಅಂಕ ಗಳಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.
25ರ ಹರೆಯದ ಪಂಜಾಬ್ನ ಶೂಟರ್ ಉತ್ತಮ ಆರಂಭ ಪಡೆದ ಹೊರತಾಗಿಯೂ ಒತ್ತಡದ ಕ್ಷಣವು ಅವರಿಗೆ ಮುಳುವಾಯಿತು.
ಕ್ರೊಯೇಶಿಯದ ಮಿರಾನ್ ಮರಿಸಿಕ್ ಒಟ್ಟು 230 ಅಂಕ ಗಳಿಸಿ ಕಂಚಿನ ಪದಕ ಜಯಿಸಿದರು. ಚೀನಾದ ಶೆಂಗ್ ಲಿಹಾವೊ(252.2) ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಸ್ವೀಡನ್ನ ವಿಕ್ಟರ್ ಲಿಂಡ್ಗ್ರೆನ್ 251.4 ಅಂಕ ಗಳಿಸಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.
ಅರ್ಜುನ್ ಸ್ಪರ್ಧೆಯಲ್ಲಿ 10.7, 10.2 ಹಾಗೂ 10.5 ಅಂಕ ಗಳಿಸಿ 4ನೇ ಸ್ಥಾನದಲ್ಲಿದ್ದರು. 4ನೇ ಪ್ರಯತ್ನದಲ್ಲಿ 10.4 ಅಂಕ ಗಳಿಸಿದ ಅರ್ಜುನ್ 3ನೇ ಸ್ಥಾನಕ್ಕೇರಿದ್ದರು. 10.6 ಅಂಕದೊಂದಿಗೆ ಮೊದಲ ಸಿರೀಸ್ ಅಂತ್ಯಗೊಳಿಸಿದ್ದರು.
2ನೇ ಸೀರಿಸ್ನಲ್ಲಿ 10.7, 10.5 ಹಾಗೂ 10.8 ಅಂಕ ಗಳಿಸಿದ ಅರ್ಜುನ್ ತನ್ನ ಉತ್ತಮ ಪ್ರದರ್ಶನ ಮುಂದುವರಿಸಿದರು. ಈ ಅದ್ಭುತ ಪ್ರಯತ್ನವು ಅರ್ಜುನ್ರನ್ನು 2ನೇ ಸ್ಥಾನದಲ್ಲಿರಿಸಿತು. ವಿಶ್ವ ದಾಖಲೆ ವೀರ ಚೀನಾದ ಶೆಂಗ್ ಲಿಹಾವೊರಿಂದ 0.1 ಅಂಕದಿಂದ ಹಿಂದಿದ್ದರು.
ಆದರೆ ನಿರ್ಣಾಯಕ ಕ್ಷಣಗಳಲ್ಲಿ ಅರ್ಜುನ್ ಅವರಿಗೆ ಫಾರ್ಮ್ ಕೈಕೊಟ್ಟಿತು. ಕ್ರೊಯೇಶಿಯದ ಮಿರಾನ್ ಮರಿಸಿಕ್ ಅವರ 10.7 ಅಂಕಕ್ಕೆ ಉತ್ತರವಾಗಿ ಅರ್ಜುನ್ 9.5 ಅಂಕ ಗಳಿಸಿದ ಕಾರಣ ಪದಕ ಗೆಲ್ಲುವ ವಿಶ್ವಾಸ ಕಮರಿಹೋಯಿತು. ಅರ್ಜುನ್ ಒಟ್ಟು 208.4 ಅಂಕ ಗಳಿಸಿದರೂ ಇದು ಪದಕ ಗೆಲ್ಲಲು ಸಾಕಾಗಲಿಲ್ಲ.
ಮಹಿಳೆಯರ 10 ಮೀ. ಏರ್ ರೈಫಲ್ ಫೈನಲ್ನಲ್ಲಿ ರಮಿತಾ ಜಿಂದಾಲ್ 7ನೇ ಸ್ಥಾನ ಪಡೆದ ನಂತರ ಅರ್ಜುನ್ ಗೇಮ್ಸ್ನ 3ನೇ ದಿನವಾದ ಸೋಮವಾರ ಪದಕ ವಂಚಿತರಾದ ಭಾರತದ ಎರಡನೇ ಶೂಟರ್ ಎನಿಸಿಕೊಂಡರು.
ರವಿವಾರ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಒಟ್ಟು 630.1 ಅಂಕ ಗಳಿಸಿದ್ದ ಅರ್ಜುನ್ 7ನೇ ಸ್ಥಾನ ಪಡೆದಿದ್ದರು. ಪ್ರಸಕ್ತ ಗೇಮ್ಸ್ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಫೈನಲ್ಗೆ ಅರ್ಹತೆ ಪಡೆದ ಭಾರತದ 3ನೇ ಸ್ಪರ್ಧಿ ಎನಿಸಿಕೊಂಡಿದ್ದರು.
ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯರಾಗಿದ್ದ ಮನು ಭಾಕರ್ ಕಂಚು ಜಯಿಸಿ ಇತಿಹಾಸ ನಿರ್ಮಿಸಿದ್ದರು.







