ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಮ್ಯಾರಥಾನ್ | ನೆದರ್ಲ್ಯಾಂಡ್ಸ್ನ ಸಿಫಾನ್ ಹಸನ್ ಚಾಂಪಿಯನ್

ಸಿಫಾನ್ ಹಸನ್ | PC : Olympics.com
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ರವಿವಾರ ನೆದರ್ಲ್ಯಾಂಡ್ಸ್ನ ಸಿಫಾನ್ ಹಸನ್ ಮಹಿಳೆಯರ ಮ್ಯಾರಥಾನ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಈಗಾಗಲೇ 5,000 ಮೀ. ಹಾಗೂ 10,000 ಮೀ. ಓಟದಲ್ಲಿ ಕಂಚು ಜಯಿಸಿರುವ ಸಿಫಾನ್ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ.
ಇಥಿಯೋಪಿಯಾದ ಟಿಗ್ಸ್ ಅಸೆಫಾರಿಂದ ತೀವ್ರ ಸ್ಪರ್ಧೆ ಎದುರಿಸಿದ ಸಿಫಾನ್ ಎರಡು ಗಂಟೆ, 22 ನಿಮಿಷ ಹಾಗೂ 55 ಸೆಕೆಂಡ್ನಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದರು.
ಸಿಫಾನ್ಗಿಂತ ಮೂರು ಸೆಕೆಂಡ್ ನಂತರ ಗುರಿ ತಲುಪಿದ ಅಸೆಫಾ ಬೆಳ್ಳಿ ಪದಕ ಜಯಿಸಿದರು. ಕೀನ್ಯದ ಹೆಲೆನ್ ಒಬಿರಿ 2:23:10 ಸೆಕೆಂಡ್ನಲ್ಲಿ ಗುರಿ ತಲುಪಿ ಕಂಚಿನ ಪದಕ ತನ್ನದಾಗಿಸಿಕೊಂಡರು.
31ರ ಹರೆಯದ ಹಸನ್ 1952ರ ನಂತರ ಒಂದೇ ಆವೃತ್ತಿಯ ಒಲಿಂಪಿಕ್ಸ್ನಲ್ಲಿ ಎಲ್ಲ ಮೂರು ದೂರ ಅಂತರದ ಓಟದ ಸ್ಪರ್ಧೆಯಲ್ಲಿ ಪದಕ ಜಯಿಸಿದ ಮೊದಲ ಕ್ರೀಡಾಪಟುವೆಂಬ ಕೀರ್ತಿಗೆ ಭಾಜನರಾದರು. ಝೆಕ್ನ ಎಮಿಲ್ ಝಟೋಪೆಕ್ 72 ವರ್ಷಗಳ ಹಿಂದೆ ಈ ಸಾಧನೆ ಮಾಡಿದ್ದರು.
ನಾನು ಕನಸು ಕಾಣುತ್ತಿದ್ದೇನೆ ಎಂದು ಅನಿಸುತ್ತಿದೆ. ಇದು ಕೇವಲ 100 ಮೀ. ಓಟ ಎಂದು ಯೋಚಿಸಿದೆ. ಪ್ರತಿ ಹಂತದಲ್ಲೂ ನಾನು ನನಗೆ ಸವಾಲು ಹಾಕಿದೆ. ಮ್ಯಾರಥಾನ್ ಓಟದ ಬಗ್ಗೆ ನಾನು ಹೆದರಿದ್ದೆ ಎಂದು ಗುರಿ ತಲುಪಿದ ನಂತರ ಕುಸಿದುಬಿದ್ದ ಹಸನ್ ಹೇಳಿದ್ದಾರೆ. ನಂತರ ಚೇತರಿಸಿಕೊಂಡ ಅವರು ಹುರಿದುಂಬಿಸುತ್ತಿದ್ದ ಪ್ರೇಕ್ಷಕರತ್ತ ಕೈಬೀಸಿದರು.
ಟಮಿರಿಟಾ ಟೋಲಾ ಶನಿವಾರ ಪುರುಷರ ರೇಸ್ ಅನ್ನು ಗೆದ್ದ ನಂತರ 27ರ ಹರೆಯದ ಅಸೆಫಾ ಒಲಿಂಪಿಕ್ಸ್ ಮ್ಯಾರಥಾನ್ನಲ್ಲಿ ಇಥಿಯೋಪಿಯಾ ಕ್ಲೀನ್ಸ್ವೀಪ್ ಸಾಧಿಸಲು ನೆರವಾಗುವ ವಿಶ್ವಾಸ ಮೂಡಿಸಿದ್ದರು.
ಹಸನ್ ಕೊನೆಯ ಕ್ಷಣದಲ್ಲಿ ವಿಜಯಶಾಲಿಯಾಗಿದ್ದು ಒಲಿಂಪಿಕ್ಸ್ ಅಥ್ಲೆಟಿಕ್ಸ್ ಕಾರ್ಯಕ್ರಮಕ್ಕೆ ಸೂಕ್ತ ಕ್ಲೈಮ್ಯಾಕ್ಸ್ ಆಗಿತ್ತು.







